ಲಿಂಗಸುಗೂರು: ಅಂತರ್ಜಾತಿ ವಿವಾಹವಾಗಿರುವ ಕಾರಣಕ್ಕೆ ಮಹಿಳೆ ಹಾಗೂ ಆಕೆಯ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಜಾತಿ ಆಧಾರಿತ ನಿಂದನೆ, ಕೌಟುಂಬಿಕ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರ ಹೇರಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಪ್ರತಿಭಟನಾಕಾರರು ಸಂತ್ರಸ್ತೆ ಅಮೃತಾ ಅಂಬಿಗೇರ ಹಾಗೂ ಅವರ ಇಬ್ಬರು ಮಕ್ಕಳಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸತ್ಯಮ್ಮ ಅವರಿಗೆ ಸಲ್ಲಿಸಿದರು.
ಅಮೃತಾ ಅಂಬಿಗೇರ ಅವರು 2021ರಲ್ಲಿ ದರ್ಶನ್ ಮೆಹತಾ ಅವರೊಂದಿಗೆ ಅಂತರ್ಜಾತಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಪತಿ ದರ್ಶನ್ ಮೆಹತಾ ಅವರು ಪತ್ನಿ ಮತ್ತು ಮಕ್ಕಳನ್ನು ತೊರೆದು ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಳೆದ 30 ದಿನಗಳಿಂದ ಅಮೃತಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಪತಿಯ ಮನೆಗೆ ತೆರಳಿ, ಕುಟುಂಬದೊಂದಿಗೆ ವಾಸಿಸಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದರೂ ಪತಿ ಹಾಗೂ ಅವರ ಕುಟುಂಬದವರು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಬದಲಾಗಿ ಜಾತಿ ಆಧಾರಿತ ನಿಂದನೆ ಮಾಡುವುದು, ನಾಯಿಯನ್ನು ಬಿಟ್ಟು ಬೆದರಿಸುವುದು ಸೇರಿದಂತೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪರಿಸ್ಥಿತಿಯಿಂದ ಅಮೃತಾ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ನೆಲೆಸಲು ಸುರಕ್ಷಿತ ಸ್ಥಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆ ಮತ್ತು ಮಕ್ಕಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಸಂತ್ರಸ್ತೆ ನೀಡಿರುವ ದೂರಿನ ಆಧಾರದಲ್ಲಿ ಪತಿ ದರ್ಶನ್ ಮೆಹತಾ ಹಾಗೂ ಅವರ ಕುಟುಂಬದವರ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸಬೇಕು. ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಅನ್ವಯವಾಗುವ ಜಾತಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಮೃತಾ ಮತ್ತು ಅವರ ಮಕ್ಕಳಿಗೆ ತಕ್ಷಣ ಪೊಲೀಸ್ ರಕ್ಷಣೆ ಒದಗಿಸುವುದರ ಜೊತೆಗೆ ಸುರಕ್ಷಿತ ವಸತಿ ವ್ಯವಸ್ಥೆ ಕಲ್ಪಿಸಬೇಕು. ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಆಹಾರ, ವಸತಿ, ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳಿಗೆ ಅಗತ್ಯವಾದ ಆರ್ಥಿಕ ನೆರವು ಹಾಗೂ ಜೀವನಾಂಶ ದೊರೆಯುವಂತೆ ಕಾನೂನು ನೆರವು ಒದಗಿಸಬೇಕು ಎಂದು ಮನವಿ ಮಾಡಿದರು.
ಮಹಿಳೆಯರು ತಮ್ಮ ಇಚ್ಛೆಯಂತೆ ವಿವಾಹವಾಗುವ ಸಂವಿಧಾನಬದ್ಧ ಹಕ್ಕು ಹೊಂದಿದ್ದು, ಅಂತರ್ಜಾತಿ ವಿವಾಹದ ಕಾರಣಕ್ಕೆ ಯಾರನ್ನೂ ಅವಮಾನಿಸುವುದು ಅಥವಾ ಸಾಮಾಜಿಕವಾಗಿ ಬಹಿಷ್ಕರಿಸುವುದು ಸರಿಯಲ್ಲ. ಮಹಿಳೆ ಮತ್ತು ಮಕ್ಕಳ ಸುರಕ್ಷತೆ ಹಾಗೂ ಗೌರವಯುತ ಬದುಕಿಗೆ ಸಂಬಂಧಪಟ್ಟ ಇಲಾಖೆಗಳು ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ರಾಜ್ಯ ಮುಖಂಡ ಆರ್. ಮಾನಸಯ್ಯ, ದಲಿತ ಮುಖಂಡ ನಿಂಗಪ್ಪ ಪರಂಗಿ, ಮಹಿಳಾ ಸಬಲೀಕರಣ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷೆ ವಿಜಯರಾಣಿ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಶಿವಮ್ಮ, ಸಂಚಾಲಕಿ ರತ್ನ ಕಟ್ಟಿಮನಿ, ಶರಣಪ್ಪ ಹನುಕುಂಟಿ, ಆದೇಶ ನಾಯಕ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.



