ಲಿಂಗಸುಗೂರು, ನ.5: ತಾಲೂಕಿನ ರೈತರ ಜೀವನಾಡಿಯಾಗಿರುವ ನಾರಾಯಣಪುರ ಬಲದಂಡೆ ಹಾಗೂ ರಾಮಪುರ ಏತ ನೀರಾವರಿ ಕಾಲುವೆಗಳಿಗೆ ಡಿಸೆಂಬರ್ ಕೊನೆಯ ವಾರದವರೆಗೆ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನಾಲ್ಕು ಕಡೆ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕೋಡಿಹಾಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ನೀರಾವರಿ ಸಮಸ್ಯೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಸತ್ಯಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿ, ಬೆಳೆಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ ರೆಡ್ಡಿ ಮಾತನಾಡಿ, ನವೆಂಬರ್ 12ರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದು ರೈತರಲ್ಲಿ ತೀವ್ರ ಆತಂಕ ಉಂಟುಮಾಡಿದೆ. ತಾಲೂಕಿನ ಬಹುತೇಕ ರೈತರು ಕೃಷಿಗಾಗಿ ನಾರಾಯಣಪುರ ಬಲದಂಡೆ ಹಾಗೂ ರಾಮಪುರ ಏತ ನೀರಾವರಿ ಕಾಲುವೆಗಳ ನೀರನ್ನೇ ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀರು ಸ್ಥಗಿತಗೊಳಿಸಿದರೆ ರೈತರು ಬೆಳೆದಿರುವ ಬೆಳೆಗಳಿಗೆ ಭಾರಿ ಹಾನಿಯಾಗಲಿದೆ ಎಂದು ಹೇಳಿದರು.

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ರೈತರು ಕಡಲೆ, ಜೋಳ, ಗೋಧಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಸದ್ಯ ಬೆಳೆಗಳು ಬೆಳವಣಿಗೆಯ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಸಮರ್ಪಕ ನೀರಾವರಿ ಸೌಲಭ್ಯ ಅತ್ಯಂತ ಅಗತ್ಯವಾಗಿದೆ. ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ಒಣಗುವ ಆತಂಕ ಎದುರಾಗಲಿದೆ ಎಂದು ತಿಳಿಸಿದರು.

ರೈತರು ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಕಾರ್ಮಿಕರ ವೇತನ ಹಾಗೂ ಡೀಸೆಲ್ ಸೇರಿದಂತೆ ಕೃಷಿ ಚಟುವಟಿಕೆಗಳಿಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿ ಖರ್ಚು ಮಾಡಿದ್ದಾರೆ. ಬೆಳೆಗಳು ಕೈಗೆ ಬರುವ ಹಂತದಲ್ಲಿ ನೀರಿನ ಕೊರತೆ ಉಂಟಾದರೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೃಷಿ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನೀರಾವರಿ ಸೌಲಭ್ಯವನ್ನು ಸ್ಥಗಿತಗೊಳಿಸುವುದು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹಿತದೃಷ್ಟಿಯಿಂದ ನಾರಾಯಣಪುರ ಬಲದಂಡೆ ಹಾಗೂ ರಾಮಪುರ ಏತ ನೀರಾವರಿ ಕಾಲುವೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ಸಮರ್ಪಕ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿಸಬೇಕು. ವಿಶೇಷವಾಗಿ ಕಾಲುವೆಗಳ ಕೊನೆಯ ಭಾಗದಲ್ಲಿರುವ ರೈತರ ಜಮೀನುಗಳಿಗೆ ನೀರು ತಲುಪುತ್ತಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಕಾಲುವೆಗಳ ಮೂಲಕ ನೀರಿನ ಸಮರ್ಪಕ ಹಂಚಿಕೆ ಹಾಗೂ ನಿರ್ವಹಣೆಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ನೀರು ಹರಿಸುವಲ್ಲಿ ಯಾವುದೇ ತಾರತಮ್ಯವಾಗದಂತೆ ನೋಡಿಕೊಳ್ಳಬೇಕು. ರೈತರ ಬೆಳೆಗಳ ರಕ್ಷಣೆಗೆ ಸರ್ಕಾರ ಹಾಗೂ ನೀರಾವರಿ ಇಲಾಖೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ, ಮಹಾದೇವಿ ದೇವಿನಾಳಮಠ, ಉಮಾದೇವಿ ನಾಯಕ, ದೇವಕಿ ನಾಯಕ, ತಾಲೂಕು ಜಿಲ್ಲಾಧ್ಯಕ್ಷ ಮಲ್ಲೇಶ ನಾಯಕ, ರಾಮಣ್ಣ ಗೌಡೂರು, ಸೋಮರೆಡ್ಡಿ, ಅಮರಯ್ಯ ಗುಡದನಾಳ, ನಾಗಪ್ಪ ಮೋನೆದ್, ರಂಗಪ್ಪ, ಹುಲಗಪ್ಪ ನಾಯಕ, ಹನುಮಂತ ಹಳ್ಳಿ, ಆದಪ್ಪ, ದುರುಗಪ್ಪ ಗೌಡೂರು, ಹುಲಗಪ್ಪ ದೋಣಿ, ಭೀಮಪ್ಪ ಹೊಳಪ್ಪ, ವೀರಭದ್ರ, ಹುಲಗಪ್ಪ ದೊಡ್ಡಿ, ಶಿವನಗೌಡ, ಇಮಾಮ್ ಸಾಬ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.