ಲಿಂಗಸುಗೂರು: ತಾಲೂಕಿನ ವಿವಿಧ ಹೋಬಳಿಗಳಲ್ಲಿ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ವಿದ್ಯುತ್ ಕಡಿತವನ್ನು ನಿಲ್ಲಿಸಿ ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ನಿರಂತರ 9 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ, ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ರೈತರ ಪಂಪ್ಸೆಟ್ಗಳು ಸುಟ್ಟುಹೋಗುತ್ತಿರುವ ಪ್ರಕರಣಗಳು ಸಂಭವಿಸುತ್ತಿದ್ದು, ಇದರಿಂದ ರೈತರು ಹೆಚ್ಚುವರಿ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈಗಾಗಲೇ ಕೃಷಿ ವೆಚ್ಚದ ಹೊರೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಹೊರೆ ಉಂಟುಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿರುವುದರಿಂದ ರೈತರು ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಅತ್ಯಂತ ಅಗತ್ಯವಾಗಿದೆ. ಆದರೆ ಪದೇಪದೇ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರೈತರು ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಬೆಳೆಗಳ ಬೆಳವಣಿಗೆಯ ಹಂತದಲ್ಲಿ ನೀರಾವರಿ ಸೌಲಭ್ಯಕ್ಕೆ ಅಡಚಣೆ ಉಂಟಾದರೆ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ರೈತರ ಪಂಪ್ಸೆಟ್ಗಳಿಗೆ ಹಗಲು ವೇಳೆಯಲ್ಲಿ ನಿರಂತರ 9 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಅನಿಯಮಿತ ಲೋಡ್ ಶೆಡ್ಡಿಂಗ್ನಿಂದ ರೈತರು ಮಾತ್ರವಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳು ಓದು ಮತ್ತು ಪರೀಕ್ಷಾ ಸಿದ್ಧತೆ ನಡೆಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ರೈತರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯವನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಈಗಾಗಲೇ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ. ರೈತರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ವಿದ್ಯುತ್ ಇಲಾಖೆಯ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸಿದ ಒಂದು ವಾರದೊಳಗೆ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಆನಂದ ಕುಂಬಾರ, ಹನುಮಂತ ನೆಲೋಗಿ ಕುಪ್ಪಿಗುಡ್ಡ, ಬಸಪ್ಪ ಈಚನಾಳ, ಹನುಮಂತ, ತಿಮ್ಮಣ್ಣ, ಹುಲಗಪ್ಪ, ಸಣ್ಣ ಗದ್ದೆಪ್ಪ, ಮಲ್ಲೇಶ ಸೇರಿದಂತೆ ಹಲವಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



