ಹಟ್ಟಿ ಚಿನ್ನದ ಗಣಿ, ಸೆ.22: ಗುರುಗುಂಟ ಹೋಬಳಿ ವ್ಯಾಪ್ತಿಯ ಚಿಕ್ಕಹೆಸರೂರು ಗ್ರಾಮದ ಸರ್ವೇ ನಂ.41 ಹಾಗೂ ಅದರ ಉಪವಿಭಾಗಗಳ ಜಮೀನುಗಳನ್ನು NH-748A ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದರೂ, ಸಂಬಂಧಪಟ್ಟ ಭೂ ಮಾಲೀಕರಿಗೆ ಇದುವರೆಗೆ ಕಾನೂನುಬದ್ಧ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ದಲಿತ ಸಂರಕ್ಷ ಸಮಿತಿ ಲಿಂಗಸುಗೂರು ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ.
ಚಿಕ್ಕಹೆಸರೂರು ಗ್ರಾಮದ ಸರ್ವೇ ನಂ.41/3, 41/13, 41/20, 41/21, 41/30, 41/17 ಹಾಗೂ 41/29ರ ಜಮೀನುಗಳಲ್ಲಿ ಬಸಪ್ಪ, ಸಿದ್ದಮ್ಮ, ಜಾನಪ್ಪ, ಅಂಥೋನೆಪ್ಪ, ದುರುಗಪ್ಪ ಹಾಗೂ ಬಸವರಾಜ ಎಂ. ಪಾಟೀಲ್ ಸೇರಿದಂತೆ ಪರಿಶಿಷ್ಟ ಜಾತಿಗೆ ಸೇರಿದ ಬಡ ರೈತರು ಕಳೆದ 60ರಿಂದ 70 ವರ್ಷಗಳಿಂದ ಪಿತ್ರಾರ್ಜಿತವಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಂಬಂಧಪಟ್ಟ ಜಮೀನುಗಳಿಗೆ ಪಟ್ಟಾ, ಸಾಗುವಳಿ ಚೀಟಿ ಹಾಗೂ ಆರ್ಟಿಸಿ ದಾಖಲೆಗಳು ಇರುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಈ ಜಮೀನುಗಳನ್ನು ಬಳಸಿಕೊಂಡಿದ್ದರೂ ಭೂ ಮಾಲೀಕರಿಗೆ ಪರಿಹಾರ ಪಾವತಿಸಿಲ್ಲ. ಅಧಿಕಾರಿಗಳ ಭರವಸೆಯನ್ನು ನಂಬಿ ರೈತರು ರಸ್ತೆ ಕಾಮಗಾರಿಗೆ ಯಾವುದೇ ಅಡ್ಡಿಪಡಿಸದೆ ಸಹಕರಿಸಿದ್ದರು. ಆದರೆ ಕಾಮಗಾರಿ ಮುಂದುವರಿದರೂ ಪರಿಹಾರ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಆಗಸ್ಟ್ 25ರಂದು ಲಿಂಗಸುಗೂರು ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ಆಗಸ್ಟ್ 26ರಂದು ಜಿಲ್ಲಾಧಿಕಾರಿ, ವಿಶೇಷ ಭೂಸ್ವಾಧೀನ ಅಧಿಕಾರಿ (SLAO), ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದು 15 ದಿನಗಳೊಳಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿತ್ತು ಎಂದು ಸಮಿತಿ ತಿಳಿಸಿದೆ.
ನಿಗದಿತ ಅವಧಿಯಲ್ಲಿ ಪರಿಹಾರ ಪಾವತಿಸದಿದ್ದರೆ ಸೆ.15ರಿಂದ ಧರಣಿ ನಡೆಸುವುದಾಗಿ ಮುನ್ಸೂಚನೆ ನೀಡಲಾಗಿತ್ತು. ಆದಾಗ್ಯೂ ಆಡಳಿತದಿಂದ ನಿರೀಕ್ಷಿತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸೆ.22ರಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಲಾಗಿದೆ ಎಂದು ಮುಖಂಡರು ತಿಳಿಸಿದರು.
ಅರ್ಹ ಭೂ ಮಾಲೀಕರಿಗೆ ಸಂಪೂರ್ಣ ಪರಿಹಾರ ಮೊತ್ತವನ್ನು ಕೂಡಲೇ ಪಾವತಿಸಬೇಕು, ಪ್ರತಿಯೊಬ್ಬರ ಜಮೀನಿನ ‘ಅವಾರ್ಡ್’ ಹಾಗೂ ಪರಿಹಾರದ ಪ್ರಸ್ತುತ ಸ್ಥಿತಿಗತಿ ಕುರಿತು ಲಿಖಿತ ಮಾಹಿತಿ ನೀಡಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ. ಪರಿಹಾರ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವಾದಿತ ಜಮೀನಿನಲ್ಲಿ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂಬ ಅಥವಾ ಕರ್ತವ್ಯಲೋಪ ನಡೆದಿದೆಯೇ ಎಂಬ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಧರಣಿಯ ನೇತೃತ್ವವನ್ನು ದಲಿತ ಸಂರಕ್ಷ ಸಮಿತಿ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಜಿನ್ನಾಪೂರ, ತಾಲೂಕು ಅಧ್ಯಕ್ಷ ಕಿರಣ್ ಕುಮಾರ ಚಿಕ್ಕಹೆಸರೂರು, ತಾಲೂಕು ಉಪಾಧ್ಯಕ್ಷ ಪ್ರದೀಪ್ ಮುತ್ತು ಹಾಗೂ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಮುದಗಲ್ ವಹಿಸಿದ್ದರು. ಬಾಧಿತ ಭೂ ಮಾಲೀಕರಾದ ಸಿದ್ದಮ್ಮ, ಜಾನಪ್ಪ, ಶರಣಪ್ಪ, ಅಂಥೋನೆಪ್ಪ, ಬಸಮ್ಮ, ಬಸವರಾಜ ಎಂ. ಪಾಟೀಲ್ ಹಾಗೂ ಹರಳಯ್ಯ ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು.



