ದೇವದುರ್ಗ: ಬಿಸಿಲು, ಮಳೆ ಲೆಕ್ಕಿಸದೆ ಹಗಲು-ರಾತ್ರಿ ಶ್ರಮಿಸಿ ಬೆಳೆದ ಹತ್ತಿಯನ್ನು ಮಾರುಕಟ್ಟೆಗೆ ತರುವ ರೈತರಿಗೆ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನಷ್ಟ ಅಥವಾ ಅನ್ಯಾಯವಾಗದಂತೆ ಖರೀದಿದಾರರು ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಒತ್ತಾಯಿಸಿದ್ದಾರೆ.

ಜಾಲಹಳ್ಳಿ ಭಾಗ ಹಾಗೂ ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ ಹತ್ತಿ ಖರೀದಿಸುವ ಸಂದರ್ಭದಲ್ಲಿ ಪ್ರತಿ 1,000 ಕೆ.ಜಿ. ಹತ್ತಿಗೆ 2 ಕೆ.ಜಿ. ತೂಕ ಕಡಿತ ಮಾಡಲಾಗುತ್ತಿದೆ ಎಂಬ ದೂರುಗಳು ರೈತರಿಂದ ಕೇಳಿಬರುತ್ತಿವೆ. ಅಲ್ಲದೆ, ಗುಣಮಟ್ಟದ ನೆಪದಲ್ಲಿ ಅನಗತ್ಯವಾಗಿ ದರ ಇಳಿಕೆ ಮಾಡುವುದು ಸೇರಿದಂತೆ ರೈತರಿಗೆ ನಷ್ಟ ಉಂಟುಮಾಡುವ ಕ್ರಮಗಳು ನಡೆಯುತ್ತಿದ್ದರೆ ಸಂಬಂಧಪಟ್ಟವರು ತಕ್ಷಣವೇ ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ರೈತರು ಮಾರಾಟಕ್ಕೆ ತರುವ ಹತ್ತಿಯನ್ನು ನಿಖರವಾದ ತೂಕದಲ್ಲಿ ಖರೀದಿಸಬೇಕು. ಮಾರುಕಟ್ಟೆ ನಿಯಮಗಳಿಗೆ ಅನುಗುಣವಾಗಿ ನ್ಯಾಯಸಮ್ಮತ ಬೆಲೆ ನೀಡುವುದರ ಜೊತೆಗೆ ಪ್ರತಿಯೊಂದು ವ್ಯವಹಾರಕ್ಕೂ ಸರಿಯಾದ ರಸೀದಿ ನೀಡಬೇಕು. ಖರೀದಿ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ತೂಕದಲ್ಲಿ ವ್ಯತ್ಯಾಸ ನಡೆಯದಂತೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಹತ್ತಿ ಖರೀದಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ವ್ಯಾಪಾರಿಗಳು ಅಥವಾ ಖರೀದಿದಾರರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಆಡಳಿತವೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ರೈತರ ಪರಿಶ್ರಮವೇ ಕೃಷಿ ಆರ್ಥಿಕತೆಯ ಆಧಾರವಾಗಿದೆ. ರೈತನ ಶ್ರಮವನ್ನು ಗೌರವಿಸುವ ರೀತಿಯಲ್ಲಿ ವ್ಯಾಪಾರ ನಡೆಯಬೇಕೇ ಹೊರತು, ಅವರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ರೈತರಿಗೆ ಅನ್ಯಾಯವಾದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಮ್ಮನಿರುವುದಿಲ್ಲ. ರೈತರ ಹಕ್ಕು ಮತ್ತು ನ್ಯಾಯದ ಪರವಾಗಿ ಸಂಘಟನೆ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಮರಿಲಿಂಗ ಪಾಟೀಲ್ ತಿಳಿಸಿದ್ದಾರೆ.