ತುಂಗ ಬಿಂಬ/ರಾಯಚೂರು: ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆ ವಿಜಯಕುಮಾರ ತಂದೆ ಬಾಲನಗೌಡ ಹೊಸಮನಿ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ, ವಂಚನೆ ಹಾಗೂ ನಂಬಿಕೆ ದ್ರೋಹಕ್ಕೆ ಸಂಬಂಧಿಸಿದ ಹಲವು ಆರೋಪಗಳು ಕೇಳಿಬಂದಿದ್ದು, ಇವುಗಳ ಕುರಿತು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್.ಕೆ. ಅಮರೇಶ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಕುಮಾರ ಅವರು ಈ ಹಿಂದೆ ರಾಯಚೂರು ನಗರದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಸೇವಾ ಅವಧಿಯಲ್ಲಿ ತಮ್ಮ ಹುದ್ದೆಯ ಪ್ರಭಾವ ಬಳಸಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಹಾಗೂ ಆದಾಯಕ್ಕೆ ಹೊಂದಿಕೆಯಾಗದ ಆಸ್ತಿಗಳನ್ನು ಗಳಿಸಿದ್ದಾರೆ ಎಂಬ ಆರೋಪಗಳಿವೆ ಎಂದು ಹೇಳಿದರು.
ಲಿಂಗಸುಗೂರು, ಮುದಗಲ್ಲ, ಇಳಕಲ್ ಸೇರಿದಂತೆ ವಿವಿಧ ಕಡೆ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ಹೆಸರಿನಲ್ಲಿ ಆಸ್ತಿಗಳಿರುವ ಕುರಿತು ಕೆಲವು ದಾಖಲೆಗಳು ತಮ್ಮ ಬಳಿ ಲಭ್ಯವಿವೆ ಎಂದು ಹೇಳಿದ ಅವರು, ಶ್ರೀಮತಿ ಹಂಪಮ್ಮ ಗಂಡ ವಿಜಯಕುಮಾರ, ಬಾಲನಗೌಡ ತಂದೆ ಸಂಗನಗೌಡ ಹೊಸಮನಿ ಹಾಗೂ ಜಗದೀಶ ಪ್ರಸಾದ್ ತಂದೆ ಬಾಲನಗೌಡ ಹೊಸಮನಿ ಅವರ ಹೆಸರಿನಲ್ಲಿರುವ ಆಸ್ತಿಗಳ ಮೂಲ, ಖರೀದಿ ವಿವರ ಹಾಗೂ ಆದಾಯದ ಮೂಲಗಳನ್ನು ಸಂಬಂಧಿಸಿದ ತನಿಖಾ ಸಂಸ್ಥೆಗಳು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಕುಟುಂಬದ ಹೆಸರಿನಲ್ಲಿರುವ ಆಸ್ತಿಗಳ ಒಟ್ಟು ಮೌಲ್ಯ ₹10 ಕೋಟಿಗೂ ಅಧಿಕವಾಗಿರಬಹುದು ಎಂಬ ಆರೋಪವಿದ್ದು, ಈ ಅಂಶವನ್ನು ಅಧಿಕೃತ ತನಿಖೆಯ ಮೂಲಕವೇ ದೃಢಪಡಿಸಬೇಕು. ಆಸ್ತಿ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು ಹಾಗೂ ಆದಾಯದ ಮೂಲಗಳನ್ನು ಪರಿಶೀಲಿಸಿದರೆ ವಾಸ್ತವಾಂಶ ಹೊರಬರಲಿದೆ ಎಂದು ಅಮರೇಶ ಹೇಳಿದರು.
ವಿಜಯಕುಮಾರ ಅವರ ವಿರುದ್ಧ ಈ ಹಿಂದೆಯೂ ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, 2024ರ ಡಿಸೆಂಬರ್ 26ರಂದು ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟ ಮಾದಯ್ಯ ಅವರು ಅವರನ್ನು ಅಮಾನತುಗೊಳಿಸಿದ್ದರು ಎಂಬ ಮಾಹಿತಿ ಇದೆ. ಈ ಕುರಿತು ಇಲಾಖೆಯ ದಾಖಲೆಗಳು ಹಾಗೂ ಅಂದಿನ ವರದಿಗಳನ್ನು ಪರಿಶೀಲಿಸಿ, ಹಿಂದೆ ಕೈಗೊಂಡ ಕ್ರಮಗಳ ವಿವರಗಳನ್ನೂ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹನುಮಂತ ಆರೋಲಿಕರ್ ಮಾತನಾಡಿ, ಲಿಂಗಸುಗೂರು ತಾಲೂಕಿನಲ್ಲಿ ವಿಜಯಕುಮಾರ ಅವರು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಪ್ರಥಾಪ್ ರೆಡ್ಡಿ ಸೇರಿದಂತೆ ಕೆಲವರೊಂದಿಗೆ ಪಾಲುದಾರಿಕೆಯಲ್ಲಿ ಬಡಾವಣೆ ಅಭಿವೃದ್ಧಿ ಹಾಗೂ ಆಸ್ತಿ ವ್ಯವಹಾರ ನಡೆಸಿ, ನಂತರ ಹಣಕಾಸಿನ ವಿಚಾರದಲ್ಲಿ ವಿವಾದ ಉಂಟಾಗಿದೆ ಎಂಬ ದೂರುಗಳಿವೆ. ಈ ಎಲ್ಲ ಆರೋಪಗಳ ಸತ್ಯಾಸತ್ಯತೆಯನ್ನು ದಾಖಲೆ ಆಧಾರದಲ್ಲಿ ಪರಿಶೀಲಿಸಬೇಕು ಎಂದು ಹೇಳಿದರು.
ಗುರುಗುಂಟಾ ಹೋಬಳಿಯ ಭೀಮಣ್ಣ ಎಂಬ ರೈತನ ಜಮೀನು ವ್ಯವಹಾರದಲ್ಲಿಯೂ ವಂಚನೆ ನಡೆದಿದೆ ಎಂಬ ಆರೋಪವಿದ್ದು, ಪೊಲೀಸ್ ಠಾಣೆಗೆ ಬಂದ ಸಂದರ್ಭದಲ್ಲಿ ಉಂಟಾದ ಪರಿಚಯದ ಬಳಿಕ ದಾಖಲೆಗಳಿಗೆ ಸಹಿ ಪಡೆದು ಜಮೀನು ವ್ಯವಹಾರದಲ್ಲಿ ತೊಂದರೆ ಉಂಟುಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ. ಸಂಬಂಧಿಸಿದ ಜಮೀನು ದಾಖಲೆಗಳು, ಒಪ್ಪಂದ ಪತ್ರಗಳು ಹಾಗೂ ದೂರುಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಬಾಲನಗೌಡ ಹೊಸಮನಿ ಅವರ ಹೆಸರಿನಲ್ಲಿದ್ದ ಒಂದು ಎಕರೆ ಜಮೀನನ್ನು ₹95 ಲಕ್ಷಕ್ಕೆ ಖರೀದಿಸುವುದಾಗಿ ಹೇಳಿ ₹44 ಲಕ್ಷ ಮುಂಗಡ ಪಾವತಿಸಲಾಗಿದೆ ಎಂದು ತೋರಿಸುವ ವಿವಾದಿತ ಖರೀದಿ ಪತ್ರದ ಕುರಿತು ಸಹ ಆರೋಪಗಳಿವೆ ಎಂದು ತಿಳಿಸಿದರು. 2023ರ ಮಾರ್ಚ್ 6ರಂದು ಸಿದ್ಧಪಡಿಸಲಾಗಿದೆ ಎನ್ನಲಾಗಿರುವ ಬಾಂಡ್ಗೆ ಸಂಬಂಧಿಸಿದ ಪ್ರಕರಣದಿಂದ ಲಿಂಗಸುಗೂರಿನ ಹನಮಯ್ಯ ತಂದೆ ರಾಮಚಂದ್ರಪ್ಪ ಅವರಿಗೆ ಸಮಸ್ಯೆ ಉಂಟಾಗಿದೆ ಎಂಬುದಾಗಿ ಹೇಳಿದರು. ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ, ನ್ಯಾಯಾಲಯದ ದಾಖಲೆಗಳು ಮತ್ತು ಸಂಬಂಧಿಸಿದ ಸಾಕ್ಷ್ಯಗಳನ್ನು ಆಧರಿಸಿಯೇ ವಾಸ್ತವಾಂಶ ನಿರ್ಧಾರವಾಗಬೇಕು ಎಂದರು.
ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲೂಕು ಅಧ್ಯಕ್ಷ ಹನುಮಂತ ನಾಯಕ ಮಾತನಾಡಿ, ಪೊಲೀಸ್ ಹುದ್ದೆಯ ಪ್ರಭಾವವನ್ನು ಬಳಸಿಕೊಂಡು ಬಡವರು, ರೈತರು ಹಾಗೂ ಸರ್ಕಾರಿ ನೌಕರರ ಮೇಲೆ ಒತ್ತಡ ಹೇರುವ ಮೂಲಕ ಆಸ್ತಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಗಂಭೀರ ಆರೋಪಗಳ ಕುರಿತು ಪೊಲೀಸ್ ಇಲಾಖೆಯ ಜೊತೆಗೆ ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ತನಿಖಾ ಸಂಸ್ಥೆಗಳೂ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ವಿಜಯಕುಮಾರ ಹಾಗೂ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿಗಳು, ರಿಯಲ್ ಎಸ್ಟೇಟ್ ವ್ಯವಹಾರಗಳು, ಹಣಕಾಸಿನ ವಹಿವಾಟುಗಳು ಹಾಗೂ ಆದಾಯದ ಮೂಲಗಳ ಕುರಿತು ಸಮಗ್ರ ತನಿಖೆ ನಡೆಯಬೇಕು. ಆರೋಪಗಳಿಗೆ ಸಾಕ್ಷ್ಯ ದೊರೆತಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಆರೋಪಗಳು ದೃಢಪಡದಿದ್ದರೆ ಅದನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಿ ಅನಗತ್ಯ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಲಾಯಿತು.



