ಮಾನ್ವಿ: ವಿದ್ಯಾರ್ಥಿಗಳ ಬದುಕನ್ನು ಉತ್ತಮವಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದು ಕಲ್ಮಠ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಶಿಕ್ಷಕ ರಾಜಶೇಖರ್ ಎಚ್. ಹೇಳಿದರು.
ಪಟ್ಟಣದ ಕಲ್ಮಠ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಿದಾಗ ಅವರನ್ನು ರೂಪಿಸಿದ ಶಿಕ್ಷಕರಿಗೂ ಹೆಮ್ಮೆ ಮತ್ತು ಸಂತಸವಾಗುತ್ತದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಪಡೆದುಕೊಳ್ಳಲು ಅನೇಕ ಮಾರ್ಗಗಳು ಸುಲಭವಾಗಿ ಲಭ್ಯವಿದ್ದರೂ, ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಸರಿಯಾದ ಜೀವನ ಮಾರ್ಗವನ್ನು ಗುರುಗಳ ಮಾರ್ಗದರ್ಶನದಿಂದ ಪಡೆಯಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನವನ್ನು ಗೌರವದಿಂದ ಸ್ವೀಕರಿಸಿ, ಉತ್ತಮ ಶಿಕ್ಷಣ ಪಡೆದು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಶಾಲೆಯಲ್ಲಿ ಕಲಿತ ಜ್ಞಾನ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ಕಲ್ಮಠ ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಜಿ.ಎಂ.ಎಚ್.ಪಿ.ಎಸ್. ಗುಂಜಳ್ಳಿ ಶಾಲೆಯ ಶಿಕ್ಷಕಿ ಹನುಮಂತಮ್ಮ ತಮ್ಮಾಪುರ ಮಾತನಾಡಿ ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಾಲಾ ಸಂಸತ್ ಮುಖ್ಯಮಂತ್ರಿ ವೀರೇಶ್, ಪ್ರಾಥಮಿಕ ಶಾಲಾ ಸಂಸತ್ ಮುಖ್ಯಮಂತ್ರಿ ಅನಿಲಕುಮಾರ್ ಹಾಗೂ ವಿದ್ಯಾರ್ಥಿಗಳಾದ ಸೌಭಾಗ್ಯ, ಪೂಜಾ, ಮಲ್ಲಿಕಾರ್ಜುನ, ಸಾಗರ್ ಸೇರಿದಂತೆ ಹಲವರು ಶಿಕ್ಷಕರ ದಿನಾಚರಣೆ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಲ್ಮಠ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ, ಕಲ್ಮಠ ಪ್ರೌಢಶಾಲೆಯ ಮುಖ್ಯಗುರು ಪ್ರಭಯ್ಯ ಸ್ವಾಮಿ, ಪ್ರಾಥಮಿಕ ಶಾಲೆಯ ಮುಖ್ಯಗುರು ಮಂಜುನಾಥ ಕಮತರ, ಎಂ.ಎಂ. ಹಿರೇಮಠ, ಕೆಮ್ಯಾನಾಯ್ಕ, ಭ್ರಮರಾಂಬ, ರವಿ ಹುಲಿಯಾಪುರ, ಜಯಶ್ರೀ, ಮಹಾಂತಮ್ಮ, ನರಸಿಂಹಲು, ರಾಘವೇಂದ್ರ, ರೂಪ, ಗೀತಾ, ಪ್ರಭಾವತಿ, ರಿಜ್ವಾನ, ಸೌಮ್ಯ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



