ತುಂಗಾ ಬಿಂಬ/ದೇವದುರ್ಗ, ಸೆ.17: ತಾಲೂಕಿನ ಚಿಕ್ಕಹೊನ್ನಕುಣಿಯಲ್ಲಿರುವ ಕೆಬಿಜೆಎನ್‌ಎಲ್ ವಿಭಾಗ ಸಂಖ್ಯೆ–6 ಹಾಗೂ ಎರಡು ಉಪವಿಭಾಗಗಳ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಒತ್ತಾಯಿಸಿ ಸೆ.28ರಂದು ಚಿಕ್ಕಹೊನ್ನಕುಣಿಯಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ 9ರಿಂದ 18ನೇ ವಿತರಣಾ ಕಾಲುವೆಗಳ ಮೂಲಕ ವ್ಯಾಪಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಪ್ರದೇಶದಲ್ಲಿ ಟೇಲೆಂಡ್ ಸಮಸ್ಯೆಯ ಜೊತೆಗೆ ಹಲವು ಕಾಲುವೆಗಳ ದುರಸ್ತಿ ಕಾಮಗಾರಿಗಳು ಇನ್ನೂ ಬಾಕಿ ಇವೆ ಎಂದು ಹೇಳಿದರು. 15 ಮತ್ತು 16ನೇ ವಿತರಣಾ ಕಾಲುವೆಗಳ ಮೂಲಕ ಸುಮಾರು 22 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಲಿಂಗಸುಗೂರು ಮತ್ತು ರಾಯಚೂರು ತಾಲೂಕುಗಳಿಗೆ ಹೋಲಿಸಿದರೆ ದೇವದುರ್ಗ ಭಾಗದಲ್ಲಿಯೂ ಹೆಚ್ಚಿನ ನೀರಾವರಿ ವ್ಯಾಪ್ತಿ ಇರುವುದರಿಂದ ರೈತರ ಅನುಕೂಲಕ್ಕಾಗಿ ಅಮರಾಪುರ ಹಾಗೂ ಚಿಕ್ಕಹೊನ್ನಕುಣಿಯಲ್ಲಿ ಜಮೀನು ಖರೀದಿಸಿ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಕಚೇರಿ ಸ್ಥಳಾಂತರಿಸಲು ಮುಂದಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿಸಿದರು. ಕಚೇರಿಗಳ ಸ್ಥಳಾಂತರದಿಂದ ಕಾಲುವೆ ನೀರಿನ ನಿರ್ವಹಣೆ, ದುರಸ್ತಿ ಕಾಮಗಾರಿ ಮತ್ತು ರೈತರ ಅಹವಾಲುಗಳಿಗೆ ಸ್ಪಂದಿಸುವಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಎನ್‌ಆರ್‌ಬಿಸಿ ಕಾಲುವೆಯನ್ನು 157ನೇ ಕಿ.ಮೀ.ವರೆಗೆ ವಿಸ್ತರಿಸುವ ಉದ್ದೇಶದಿಂದ ಕಚೇರಿ ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗುತ್ತಿದ್ದು, ವಿಭಾಗೀಯ ಕಚೇರಿಯನ್ನು ಸ್ಥಳಾಂತರಿಸುವ ಬದಲು ಅಗತ್ಯವಿದ್ದಲ್ಲಿ ಹೊಸ ಉಪವಿಭಾಗ ಕಚೇರಿಗಳನ್ನು ಆರಂಭಿಸಬಹುದು ಎಂದು ಅಭಿಪ್ರಾಯಪಟ್ಟರು. ಕ್ಷೇತ್ರದಲ್ಲಿದ್ದ ಕಾರಾಗೃಹ ಹಾಗೂ ಭೂಸ್ವಾಧೀನ ಕಚೇರಿಗಳನ್ನು ಈಗಾಗಲೇ ರಾಯಚೂರಿಗೆ ಸ್ಥಳಾಂತರಿಸಲಾಗಿದೆ. ಇದೀಗ ನೀರಾವರಿ ಇಲಾಖೆಯ ಕಚೇರಿಯನ್ನೂ ಸ್ಥಳಾಂತರಿಸುವ ಕ್ರಮ ರೈತ ಸಮುದಾಯಕ್ಕೆ ತೊಂದರೆ ಉಂಟುಮಾಡಲಿದೆ ಎಂದು ಅವರು ಆರೋಪಿಸಿದರು. ವಿರೋಧ ಪಕ್ಷದ ಮಹಿಳಾ ಶಾಸಕಿ ಪ್ರತಿನಿಧಿಸುವ ಕ್ಷೇತ್ರ ಎಂಬ ಕಾರಣಕ್ಕೆ ಸರ್ಕಾರ ಸಮಸ್ಯೆ ಸೃಷ್ಟಿಸುತ್ತಿದೆ ಎಂಬುದು ತಮ್ಮ ಆರೋಪ ಎಂದು ಹೇಳಿದರು. ಕೆಬಿಜೆಎನ್‌ಎಲ್‌ನ ಹಿಂದಿನ ನಿರ್ಧಾರದಂತೆ ಚಿಕ್ಕಹೊನ್ನಕುಣಿಯಲ್ಲಿಯೇ ಮುಖ್ಯ ಇಂಜಿನಿಯರ್ ಹಾಗೂ ಅಧೀಕ್ಷಕ ಇಂಜಿನಿಯರ್ ಕಚೇರಿಗಳನ್ನು ಆರಂಭಿಸಬೇಕು. ಅಲ್ಲದೆ, ಪ್ರಸ್ತುತ ಕಚೇರಿಗಳ ಸ್ಥಳಾಂತರ ಆದೇಶವನ್ನು ತಕ್ಷಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆ ಮುಂದಿಟ್ಟುಕೊಂಡು ಸೆ.28ರಂದು ಚಿಕ್ಕಹೊನ್ನಕುಣಿಯಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಧರಣಿ ನಡೆಸಲಾಗುವುದು ಎಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ, ಅರಕೇರಾ ತಾಲೂಕು ಜೆಡಿಎಸ್ ಅಧ್ಯಕ್ಷ ಸಿದ್ದಣ್ಣ ಬಿ. ಗಣೇಕಲ್, ಮುಖಂಡರಾದ ಅಮರೇಶ ಪಾಟೀಲ್ ಪರ್ತಾಪುರ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ಚನ್ನಪ್ಪ ನಾಯಕ ಮಸೀದಿಪುರ, ಗೋವಿಂದರಾಜ್ ಕೊತ್ತದೊಡ್ಡಿ, ಮಹಬೂಬಸಾಬ್ ಹೆಗ್ಗಡದಿನ್ನಿ ಹಾಗೂ ರಮೇಶ ರಾಮನಾಳ ಉಪಸ್ಥಿತರಿದ್ದರು.