ತುಂಗಾ ಬಿಂಬ/ಸಿಂಧನೂರು: ಜೆಡಿಎಸ್ ಯುವ ಮುಖಂಡ ಅಭಿಷೇಕ್ ನಾಡಗೌಡ ಅವರ 37ನೇ ಜನ್ಮದಿನವನ್ನು ನಗರದ ಒಳಬಳ್ಳಾರಿ ರಸ್ತೆಯ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾಡಗೌಡ್ರು ಅಭಿಮಾನಿ ಬಳಗ, ತಾಲೂಕು ಜೆಡಿಎಸ್ ಘಟಕ, ಶ್ರೀ ಶಾಂಭವಿ ಪುಣ್ಯಾಶ್ರಮ, ಹರೇಟನೂರು ಸ್ವಾಮಿ ಚಾರಿಟೇಬಲ್ ಟ್ರಸ್ಟ್, ಕರಡಕಲ್ ಹಾಗೂ ಅಭಿಷೇಕ್ ನಾಡಗೌಡ ಸ್ನೇಹ ಬಳಗದ ವತಿಯಿಂದ ‘ನೊಂದ ಜೀವಿಗಳ ನಾಡಿಮಿಡಿತ’ ಕಾರ್ಯಕ್ರಮದಡಿ ಆಶ್ರಮ ನಿವಾಸಿಗಳಿಗೆ ಮಹಾಪ್ರಸಾದ ಸೇವೆ ಹಾಗೂ ಹಣ್ಣು-ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಶಾಂಭವಿ ಪುಣ್ಯಾಶ್ರಮದ ವೀರೇಶ ಯಡಿಯೂರುಮಠ ಸೇರಿದಂತೆ ವಿವಿಧ ಸಮಾಜಗಳ ಗುರುಗಳು ಅಭಿಷೇಕ್ ನಾಡಗೌಡ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಅಭಿಷೇಕ್ ನಾಡಗೌಡ ಮಾತನಾಡಿ, ಕಾರುಣ್ಯ ಆಶ್ರಮ ತಮ್ಮ ಕುಟುಂಬಕ್ಕೆ ಆತ್ಮೀಯವಾದ ಸ್ಥಳವಾಗಿದ್ದು, ಇಲ್ಲಿನ ಹಿರಿಯರು ಹಾಗೂ ವಿಶೇಷಚೇತನರ ಆಶೀರ್ವಾದ ಪಡೆಯುವುದು ಕುಟುಂಬದ ಸಂಪ್ರದಾಯವಾಗಿದೆ ಎಂದರು. ಆಶ್ರಮಕ್ಕೆ ಸ್ವಂತ ಜಾಗ ಕಲ್ಪಿಸಲು ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ನಾಡಗೌಡ ಅಭಿಮಾನಿಗಳು, ಜೆಡಿಎಸ್ ಮುಖಂಡರು, ಆಶ್ರಮದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.