ತುಂಗಾ ಬಿಂಬ/ಸಿಂಧನೂರು: ಅನೇಕರ ತ್ಯಾಗ ಮತ್ತು ಬಲಿದಾನಗಳಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ದೊರಕಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಬಾದರ್ಲಿ ಹೇಳಿದರು. ನಗರದ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ, ಬೀದರ್, ಕಲಬುರಗಿ, ಬಳ್ಳಾರಿ, ಯಾದಗಿರಿ, ವಿಜಯನಗರ ಸೇರಿದಂತೆ ಅಂದಿನ ಹೈದರಾಬಾದ್ ಸಂಸ್ಥಾನಕ್ಕೆ ಒಳಪಟ್ಟಿದ್ದ ಪ್ರದೇಶಗಳು ತಕ್ಷಣವೇ ಸ್ವಾತಂತ್ರ್ಯ ಪಡೆದಿರಲಿಲ್ಲ. ಈ ಭಾಗದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹೈದರಾಬಾದ್ ನಿಜಾಮನ ಅಧಿಪತ್ಯವನ್ನು ಕೊನೆಗಾಣಿಸಲು ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸಿದ್ದರು. ಇದರ ಫಲವಾಗಿ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಆಪರೇಷನ್ ಪೋಲೋ ಸೈನಿಕ ಕಾರ್ಯಾಚರಣೆಯ ನಂತರ ಹೈದರಾಬಾದ್ ಸಂಸ್ಥಾನ ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಇಂತಹ ಇತಿಹಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅವಲೋಕಿಸಿ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದರು. ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ವೀರೇಶ ಗೋನವಾರ ಮಾತನಾಡಿ, ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಈ ಭಾಗವನ್ನು ಸ್ವಾತಂತ್ರ್ಯಗೊಳಿಸಬೇಕು ಎಂಬ ಉದ್ದೇಶದಿಂದ ಅನೇಕರು ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೈದರಾಬಾದ್ನ ಪತ್ರಕರ್ತ ಶೋಯಬುಲ್ಲಾ ಖಾನ್ ಅವರು ನಿಜಾಮನ ವಿರುದ್ಧ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದ ಹಿನ್ನೆಲೆಯಲ್ಲಿ ನಿಜಾಮನ ಸೈನಿಕರಿಂದ ಹತ್ಯೆಗೀಡಾದರು. ನಮ್ಮ ಭಾಗದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಎಂ. ನಾಗಪ್ಪ ಅವರು ರಾಯಚೂರಿನ ಸಾತ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ತಮ್ಮ ಕೆಚ್ಚೆದೆಯನ್ನು ಮೆರೆದಿದ್ದರು ಎಂದು ಸ್ಮರಿಸಿದರು. ಕನ್ನಡ ಭಾಷಾ ಶಿಕ್ಷಕ ಭೀಮರೆಡ್ಡಿ ಮಾತನಾಡಿ, ಬೀದರ್ ಜಿಲ್ಲೆಯ ಇಡೀ ಗೋರಟ ಗ್ರಾಮವೇ ನಿಜಾಮನ ವಿರುದ್ಧ ಹೋರಾಟ ನಡೆಸಿತ್ತು. ಮಾಜಿ ಸಂಸದ ರಾಮಚಂದ್ರ ವೀರಪ್ಪ ಅವರು ಕೂಡ ಈ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಜಾಕಾರರ ದಬ್ಬಾಳಿಕೆಯಿಂದ ಮಹಿಳೆಯರು, ವೃದ್ಧರು ಸೇರಿದಂತೆ ಅನೇಕರು ದೌರ್ಜನ್ಯಕ್ಕೆ ಒಳಗಾಗಿದ್ದರು. ಅಂದಿನ ಘಟನೆಗಳನ್ನು ಇತಿಹಾಸದ ಪುಟಗಳಿಂದ ತಿಳಿದುಕೊಂಡು ಮುಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮೈಹಿಬೂಬ್ ಸಾಬ್ ಮಾತನಾಡಿದರು. ವಿದ್ಯಾರ್ಥಿನಿಯರಾದ ಅಶ್ವಿನಿ, ಸಾನ್ವಿ, ಶ್ರೀರಕ್ಷಾ ಸೇರಿದಂತೆ ಅನೇಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಎಸ್ಡಿಎಂಸಿ ಸದಸ್ಯ ಶೇಖರಯ್ಯ ಸ್ವಾಮಿ ಜವಳಗೇರಾ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಶಾಲೆಯ ಶಿಕ್ಷಕರಾದ ಮೌನೇಶಪ್ಪ, ಬಸವರಾಜ ಆನೆಗುಂದಿ, ಉಮೇಶ, ದೈಹಿಕ ಶಿಕ್ಷಕ ಮೌನೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗಣಿತ ಶಿಕ್ಷಕ ಸಾವನ್ ಕೆ ಸ್ವಾಗತಿಸಿದರು. ಶಿಕ್ಷಕ ಜಡೇಶ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಲಕ್ಷ್ಮೀ ಪ್ರಿಯ ಪ್ರಾರ್ಥಿಸಿದರು. ಇಂಗ್ಲಿಷ್ ಭಾಷಾ ಶಿಕ್ಷಕ ಮಲ್ಲಪ್ಪ ಕೆ ವಂದಿಸಿದರು.



