ಸಿಂಧನೂರು: ಹಾನಗಲ್ ಕುಮಾರ ಸ್ವಾಮೀಜಿ ಅವರ 159ನೇ ಜಯಂತಿ ಅಂಗವಾಗಿ ಸೆ.23ರಂದು ನಗರದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಂತಿ ಕಾರ್ಯಕ್ರಮದ ಉದ್ಘಾಟನೆಗೆ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜಯಂತಿ ಅಂಗವಾಗಿ ಗೋರೆಬಾಳದಿಂದ ಸಿಂಧನೂರಿನವರೆಗೆ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ. ಮೆರವಣಿಗೆಯು ಗಾಂಧಿ ಸರ್ಕಲ್, ಬಸವ ಸರ್ಕಲ್ ಹಾಗೂ ಚನ್ನಮ್ಮ ಸರ್ಕಲ್ ಮಾರ್ಗವಾಗಿ ಆರ್ಜಿಎಂ ಶಾಲಾ ಆವರಣ ತಲುಪಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಆರ್ಜಿಎಂ ಶಾಲಾ ಆವರಣದಲ್ಲಿ ವಿಶೇಷ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದರು.
ಸಿಂಧನೂರಿನ 11 ವಾರ್ಡ್ಗಳು ಹಾಗೂ 11 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗುವುದು. ಯುವಕರು ಸನ್ಮಾರ್ಗದಲ್ಲಿ ಸಾಗಬೇಕು ಹಾಗೂ ದುಶ್ಚಟ ಮತ್ತು ಮಾದಕ ವ್ಯಸನಗಳಿಂದ ದೂರವಿರಬೇಕು ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಠಾಧೀಶರು ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಯುವಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಹಾನಗಲ್ ಕುಮಾರ ಸ್ವಾಮೀಜಿ ಅವರು ಸಮಾಜ ಸಂಘಟನೆ ಹಾಗೂ ಸಮಾಜದ ಏಳಿಗೆಗಾಗಿ ಮಹತ್ವದ ಕೊಡುಗೆ ನೀಡಿದ್ದು, ವಿವಿಧ ಯಾತ್ರೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ಅವರ ಆದರ್ಶ ಮತ್ತು ಸಂದೇಶಗಳನ್ನು ಯುವ ಪೀಳಿಗೆಗೆ ತಲುಪಿಸುವುದರ ಜೊತೆಗೆ ಮಾದಕ ವ್ಯಸನದಿಂದ ಯುವಕರನ್ನು ದೂರವಿಟ್ಟು ಸನ್ಮಾರ್ಗದತ್ತ ಕೊಂಡೊಯ್ಯುವುದು ಜಯಂತಿ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಎಲ್ಲ ಸಮಾಜಗಳ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಹಿರೇಗೌಡ, ಜಯಪ್ರಕಾಶ ಮಲ್ಲಾಪುರ, ರವಿಗೌಡ ಪನ್ನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.



