ಸಿಂಧನೂರು: ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ 159ನೇ ಜಯಂತಿ ಮಹೋತ್ಸವ ಸಮಾರಂಭ-2026ನ್ನು ಸೆ.23ರಿಂದ ಅ.4ರವರೆಗೆ ಸಿಂಧನೂರು ನಗರದಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶ್ರೀ ವೀರಶೈವ ಲಿಂಗಾಯತ ಸಮಾಜ ಸಿಂಧನೂರು ಹಾಗೂ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಜಯಂತಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ನಡೆಯಲಿರುವ ಮಹೋತ್ಸವದಲ್ಲಿ ಜ್ಯೋತಿರಥ ಯಾತ್ರೆ, ಸಹಜ ಶಿವಯೋಗ, ದತ್ತಿ ಉಪನ್ಯಾಸ, ಪಾದಯಾತ್ರೆ ಹಾಗೂ ಪ್ರವಚನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸೆ.23ರಂದು ಮಧ್ಯಾಹ್ನ 3 ಗಂಟೆಗೆ ಶ್ರೀ ಕುಮಾರೇಶ್ವರ ಜ್ಯೋತಿರಥ ಯಾತ್ರೆ ನಡೆಯಲಿದೆ. ಬಳಿಕ ಸೆ.24ರಿಂದ ಅ.3ರವರೆಗೆ ಪ್ರತಿದಿನ ಬೆಳಿಗ್ಗೆ ಸಹಜ ಶಿವಯೋಗ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಸರಳ ಇಷ್ಟಲಿಂಗ ವಿಧಾನ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜಯಂತಿ ಅಂಗವಾಗಿ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಯುವಜನರಲ್ಲಿ ಆಧ್ಯಾತ್ಮಿಕ, ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಸದ್ಗುಣಗಳ ಕುರಿತು ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಮಹೋತ್ಸವದ ಅವಧಿಯಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಂದೇಶ ಸಾರಲಾಗುತ್ತದೆ.

ಪ್ರತಿದಿನ ಸಂಜೆ 7 ಗಂಟೆಯಿಂದ ಸಿಂಧನೂರು ನಗರದ ಆರ್.ಜಿ.ಎಂ. ಶಾಲಾ ಮೈದಾನದಲ್ಲಿ ‘ಶ್ರೀ ಕುಮಾರೇಶ್ವರ ಜೀವನ ದರ್ಶನ’ ಪ್ರವಚನ ನಡೆಯಲಿದೆ. ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ ಜೀವನ, ಅವರ ಸಮಾಜ ಸುಧಾರಣಾ ಚಿಂತನೆ, ಶಿವಯೋಗ ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ಪ್ರವಚನಗಳಲ್ಲಿ ಬೆಳಕು ಚೆಲ್ಲಲಾಗುತ್ತದೆ.

ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳು ಸಮಾಜದಲ್ಲಿ ಶಿಕ್ಷಣ, ಧಾರ್ಮಿಕ ಜಾಗೃತಿ ಹಾಗೂ ಸಂಘಟನೆಯ ಮಹತ್ವವನ್ನು ಸಾರಿದ ಮಹನೀಯರಾಗಿದ್ದು, ಅವರ ಆದರ್ಶಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ 159ನೇ ಜಯಂತಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸೆ.23ರಿಂದ ಅ.4ರವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಸಮಾಜದ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮಹೋತ್ಸವ ಸಮಿತಿ ಮನವಿ ಮಾಡಿದೆ.