ರಾಯಚೂರು: ರಾಯಚೂರು ಗ್ರಾಮೀಣ ಹಾಗೂ ನಗರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಪೂರ್ಣಗೊಂಡಿದ್ದು, ಗೈರುಹಾಜರಿ, ವಲಸೆ, ಸ್ಥಳಾಂತರ ಹಾಗೂ ಮೃತಪಟ್ಟಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಎರಡೂ ಕ್ಷೇತ್ರಗಳಲ್ಲಿ ಒಟ್ಟು 1,06,922 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಹಶೀಲ್ದಾರ್ ಸುರೇಶ ವರ್ಮಾ ಮಾಹಿತಿ ನೀಡಿದರು.
ನಗರದ ಮಹಾನಗರ ಪಾಲಿಕೆಯ ಹಳೆಯ ಕಟ್ಟಡದ ಸಭಾಂಗಣದಲ್ಲಿ ಅಕ್ಟೋಬರ್ 28ರಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿಯ ವಿವರಗಳನ್ನು ಅವರು ಪ್ರಕಟಿಸಿದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪರಿಷ್ಕರಣೆಗೆ ಮುನ್ನ 2,39,883 ಮತದಾರರು ನೋಂದಣಿಯಾಗಿದ್ದರು. ಪರಿಶೀಲನಾ ಕಾರ್ಯದ ಬಳಿಕ ಈ ಸಂಖ್ಯೆ 2,03,686ಕ್ಕೆ ಇಳಿಕೆಯಾಗಿದೆ. ಪರಿಷ್ಕೃತ ಪಟ್ಟಿಯಲ್ಲಿ 1,00,855 ಪುರುಷರು, 1,02,810 ಮಹಿಳೆಯರು ಹಾಗೂ 21 ಇತರೆ ಮತದಾರರು ಸೇರಿದ್ದಾರೆ. ವಿವಿಧ ಕಾರಣಗಳಿಂದ 36,197 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ವಿವರಿಸಿದರು.
ಗ್ರಾಮೀಣ ಕ್ಷೇತ್ರದಲ್ಲಿ ಈ ಹಿಂದೆ 275 ಮತಗಟ್ಟೆಗಳಿದ್ದು, ಮತದಾರರ ಅನುಕೂಲತೆ ಹಾಗೂ ಆಡಳಿತಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಮೂರು ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಒಟ್ಟು ಮತಗಟ್ಟೆಗಳ ಸಂಖ್ಯೆ 278ಕ್ಕೆ ಏರಿಕೆಯಾಗಿದೆ ಎಂದರು.
ಅದೇ ರೀತಿ, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪರಿಷ್ಕರಣೆಗೆ ಮೊದಲು 2,54,403 ಮತದಾರರಿದ್ದು, ಪರಿಷ್ಕೃತ ಪಟ್ಟಿಯಲ್ಲಿ 1,84,678 ಮತದಾರರಿದ್ದಾರೆ. ಇವರಲ್ಲಿ 89,971 ಪುರುಷರು, 94,660 ಮಹಿಳೆಯರು ಹಾಗೂ 47 ಇತರೆ ಮತದಾರರು ಸೇರಿದ್ದಾರೆ. ಗೈರುಹಾಜರಿ, ಸ್ಥಳಾಂತರ ಹಾಗೂ ಮರಣ ಸೇರಿದಂತೆ ವಿವಿಧ ಕಾರಣಗಳಿಂದ 70,725 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.
ನಗರ ಕ್ಷೇತ್ರದಲ್ಲಿ ಈ ಹಿಂದೆ 250 ಮತಗಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ ನಾಲ್ಕು ಹೊಸ ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿರುವುದರಿಂದ ಒಟ್ಟು ಸಂಖ್ಯೆ 254ಕ್ಕೆ ತಲುಪಿದೆ. ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಪರಿಷ್ಕೃತ ಪಟ್ಟಿಯ ಅಂಕಿಅಂಶಗಳಿಂದ ತಿಳಿದುಬಂದಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಪೂರ್ಣಗೊಂಡಿದ್ದರೂ ಅರ್ಹ ನಾಗರಿಕರಿಗೆ ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ಮುಂದುವರಿಯಲಿದೆ. 18 ವರ್ಷ ತುಂಬಿದ ಯುವಕ-ಯುವತಿಯರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಈಗಾಗಲೇ ನೋಂದಣಿಯಾಗಿರುವ ಮತದಾರರು ತಮ್ಮ ಹೆಸರು, ವಿಳಾಸ ಸೇರಿದಂತೆ ಅಗತ್ಯ ವಿವರಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಸುರೇಶ ವರ್ಮಾ ಸ್ಪಷ್ಟಪಡಿಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹಾಗೂ ನಗರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹಾಪಾತ್ರ ಜವಾಬ್ದಾರಿ ನಿರ್ವಹಿಸಿದ್ದಾರೆ. ಎರಡೂ ಕ್ಷೇತ್ರಗಳ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ತಹಶೀಲ್ದಾರ್ ಕಾರ್ಯನಿರ್ವಹಿಸಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಭಾಗಿತ್ವ ವಹಿಸಿದ್ದಾರೆ.
ಸುಮಾರು ಎರಡು ತಿಂಗಳ ಕಾಲ ನಡೆದ ಪರಿಷ್ಕರಣಾ ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರು, ನೋಡಲ್ ಅಧಿಕಾರಿಗಳು, ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಧಿಕಾರಿ ಪೂವಿತಾ ಎಸ್., ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಮಾರ್ಗದರ್ಶನದಲ್ಲಿ ಕಾರ್ಯವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಮತದಾರರ ಮಾಹಿತಿ ಸಂಗ್ರಹಣೆ, ದಾಖಲೆಗಳ ಪರಿಶೀಲನೆ ಹಾಗೂ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಾರ್ವಜನಿಕರು, ಮತದಾರರು, ಮಾಧ್ಯಮ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸುರೇಶ ವರ್ಮಾ ಕೃತಜ್ಞತೆ ಸಲ್ಲಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಶರಣಪ್ಪ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಚುನಾವಣಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



