ರಾಯಚೂರು, ಅ.28: ಇಂಗ್ಲಿಷ್ ಭಾಷಾ ತರಬೇತಿಯು ಕೇವಲ ವಿಷಯ ಬೋಧನೆಗೆ ಸೀಮಿತವಾಗಿರದೆ, ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ. ಪ್ರವೀಣ್ ಕುಮಾರ್ ಹೇಳಿದರು.
ಬುಧವಾರ ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಾಲೆಗಳ ಇಂಗ್ಲಿಷ್ ಶಿಕ್ಷಕರಿಗಾಗಿ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಭಾಷೆಯ ಕಲಿಕೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾತ್ರವಲ್ಲದೆ, ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಉತ್ತಮ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಈ ತರಬೇತಿಯಿಂದ ಸುಮಾರು 13 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಮಹತ್ವಾಕಾಂಕ್ಷಿ ಜಿಲ್ಲೆಗಳಾಗಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಶಿಕ್ಷಕರು ಸಿಡ್ಲೂಸಿ ಸಂಸ್ಥೆಯ ವತಿಯಿಂದ ನೀಡಲಾಗುವ ತರಬೇತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ವಿದ್ಯಾರ್ಥಿಗಳ ಭಾಷಾ ಕೌಶಲ್ಯ ಹಾಗೂ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ತರಬೇತಿಯಲ್ಲಿ ಪಡೆದುಕೊಂಡ ಜ್ಞಾನ ಮತ್ತು ಬೋಧನಾ ವಿಧಾನಗಳನ್ನು ತರಗತಿಗಳಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆಯ ಕುರಿತು ಆಸಕ್ತಿ ಮೂಡಿಸುವುದರ ಜೊತೆಗೆ ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಬೇಕು. ಇದರಿಂದ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶ ಸುಧಾರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಒಟ್ಟು 46 ಶಾಲೆಗಳ ಇಂಗ್ಲಿಷ್ ಶಿಕ್ಷಕರಿಗಾಗಿ ಈ ವಿಶೇಷ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಅಲಿಚಂದ್, ಹನುಮೇಶ್, ಸಿಡ್ಲೂಸಿ ಸಂಸ್ಥೆಯ ಪ್ರಾದೇಶಿಕ ಸಂಯೋಜಕ ಸುಚಿಂದ್ರ, ಮಲ್ಲೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.



