ರಾಯಚೂರು: ಜಿಲ್ಲಾ ಮಟ್ಟದ ನಶಾಮುಕ್ತ ಭಾರತ ಅಭಿಯಾನದ ಬೀದಿನಾಟಕ (ನುಕ್ಕಡ್ ನಾಟಕ) ಸ್ಪರ್ಧೆಯಲ್ಲಿ ನಗರದ ಸೀತಾ ಸುಬ್ಬರಾಜು ಸ್ಮಾರಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇದೇ ವೇಳೆ ಜಿಲ್ಲಾ ಮಟ್ಟದ ಯುವಜನೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿಯೂ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ವೇದಾಂತ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಸೀತಾ ಸುಬ್ಬರಾಜು ಸ್ಮಾರಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಬೀದಿನಾಟಕವನ್ನು ಪ್ರದರ್ಶಿಸಿದರು.
ಮಾದಕ ವ್ಯಸನದಿಂದ ಯುವಜನರ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಕುಟುಂಬಗಳು ಎದುರಿಸುವ ಸಂಕಷ್ಟಗಳು ಮತ್ತು ಸಮಾಜದ ಮೇಲಾಗುವ ಪರಿಣಾಮಗಳನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಿದರು.
ವ್ಯಸನಮುಕ್ತ ಜೀವನದ ಮಹತ್ವವನ್ನು ಸಾರುವ ಸಂಭಾಷಣೆಗಳು, ವಿದ್ಯಾರ್ಥಿಗಳ ಅಭಿನಯ ಹಾಗೂ ಸಾಮಾಜಿಕ ಕಳಕಳಿಯ ಸಂದೇಶವು ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳ ಪ್ರದರ್ಶನಕ್ಕೆ ತೀರ್ಪುಗಾರರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಥಮ ಸ್ಥಾನ ಲಭಿಸಿತು. ಇದರೊಂದಿಗೆ ಕಾಲೇಜಿನ ತಂಡ ರಾಜ್ಯಮಟ್ಟದ ನುಕ್ಕಡ್ ನಾಟಕ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದೆ.
ಇದೇ ಸಂದರ್ಭದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕದ ಜನಪದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ನೃತ್ಯ ಪ್ರದರ್ಶಿಸಿ ದ್ವಿತೀಯ ಸ್ಥಾನ ಪಡೆದುಕೊಂಡರು.
ನೃತ್ಯದಲ್ಲಿ ವಿದ್ಯಾರ್ಥಿಗಳ ಸಮನ್ವಯ, ಕಲಾತ್ಮಕ ಅಭಿವ್ಯಕ್ತಿ ಹಾಗೂ ಪ್ರದರ್ಶನ ಕೌಶಲ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಒಂದೇ ವೇದಿಕೆಯಲ್ಲಿ ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿರುವುದು ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ.
ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯ ಪ್ರೊ. ಬಸವಂತರಾಯ ಪಾಟೀಲ, ರಾಜ್ಯಶಾಸ್ತ್ರ ಉಪನ್ಯಾಸಕಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧಿಕಾರಿ ಸ್ನೇಹ ಕುಲಕರ್ಣಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ಶಿವಪುತ್ರಪ್ಪ ಕಂಬಳಿ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು, ಸೃಜನಶೀಲತೆ ಹಾಗೂ ಸಂಘಟಿತ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ. ಪಠ್ಯ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಮಟ್ಟದ ನುಕ್ಕಡ್ ನಾಟಕ ಸ್ಪರ್ಧೆಯಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಮಹಾವಿದ್ಯಾಲಯಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.



