ರಾಯಚೂರು, ಅ.28: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2026ರ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)-2026ರ ಬಳಿಕ ರಾಯಚೂರು ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪೂವಿತಾ ಎಸ್. ತಿಳಿಸಿದ್ದಾರೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,892 ಮತಗಟ್ಟೆಗಳಿದ್ದು, 14,24,909 ಮತದಾರರು ನೋಂದಣಿಯಾಗಿದ್ದಾರೆ. ಇವರಲ್ಲಿ 7,05,951 ಪುರುಷ ಮತದಾರರು, 7,18,825 ಮಹಿಳಾ ಮತದಾರರು ಹಾಗೂ 133 ಇತರೆ ಲಿಂಗದ ಮತದಾರರು ಸೇರಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರಗಳ ಪ್ರಕಾರ, 53-ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 2,03,686 ಮತದಾರರು, 54-ರಾಯಚೂರು ನಗರ ಕ್ಷೇತ್ರದಲ್ಲಿ 1,84,678 ಮತದಾರರು, 55-ಮಾನ್ವಿ ಕ್ಷೇತ್ರದಲ್ಲಿ 2,04,511 ಮತದಾರರು, 56-ದೇವದುರ್ಗ ಕ್ಷೇತ್ರದಲ್ಲಿ 2,15,059 ಮತದಾರರು, 57-ಲಿಂಗಸುಗೂರು ಕ್ಷೇತ್ರದಲ್ಲಿ 2,25,916 ಮತದಾರರು, 58-ಸಿಂಧನೂರು ಕ್ಷೇತ್ರದಲ್ಲಿ 2,03,712 ಮತದಾರರು ಹಾಗೂ 59-ಮಸ್ಕಿ ಕ್ಷೇತ್ರದಲ್ಲಿ 1,87,347 ಮತದಾರರು ನೋಂದಣಿಯಾಗಿದ್ದಾರೆ.
ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)-2026ರ ಅಂಗವಾಗಿ ರಾಯಚೂರು ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ 1ರಂದು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಂತಿಮ ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ (ಇಆರ್ಒ) ಕಚೇರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳ (ಎಇಆರ್ಒ) ಕಚೇರಿಗಳು ಹಾಗೂ ಗೊತ್ತುಪಡಿಸಿದ ಸ್ಥಳಗಳಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗುವಂತೆ ಮಾಡಲಾಗಿದೆ.
ಸಾರ್ವಜನಿಕರು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ಜಾಲತಾಣ https://ceo.karnataka.gov.in/en ಮೂಲಕವೂ ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು.
ಜಿಲ್ಲೆಯ ಎಲ್ಲ ಅರ್ಹ ಮತದಾರರು ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪೂವಿತಾ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



