ರಾಯಚೂರು, ಅ.28: ಸರ್ಕಾರದ ಯಾವುದೇ ಮಂಜೂರಾತಿ ಆದೇಶ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಖಾಸಗಿ ವ್ಯಕ್ತಿಯ ಹೆಸರಿಗೆ ನೋಂದಣಿಯಾಗಿರುವ ಸರ್ಕಾರಿ ಭೂಮಿಯನ್ನು ಮರಳಿ ಸರ್ಕಾರದ ಹೆಸರಿಗೆ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ಅವರು ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರಿಗೆ ಆದೇಶಿಸಿದ್ದಾರೆ.

ಕಲಬುರಗಿ ತಾಲೂಕಿನ ಕಾಳನೂರು ಮತ್ತು ಜಾಪೂರ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದೇ ಜಮೀನು ಎರಡು ಪ್ರತ್ಯೇಕ ಸರ್ವೇ ನಂಬರ್‌ಗಳಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 13 ವರ್ಷಗಳ ಕಾಲ ನಡೆದ ವಿಚಾರಣೆಯ ಬಳಿಕ ಮಾಹಿತಿ ಆಯೋಗವು ಈ ಆದೇಶ ಹೊರಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಹಿತಿ ಆಯೋಗದ ಬೆಂಗಳೂರು ಹಾಗೂ ಕಲಬುರಗಿ ಪೀಠಗಳಲ್ಲಿ ಒಟ್ಟು 30 ಬಾರಿ ವಿಚಾರಣೆ ನಡೆದಿದ್ದು, ಅಂತಿಮವಾಗಿ ಅಕ್ಟೋಬರ್ 15, 2026ರಂದು ವಿಚಾರಣೆ ನಡೆಸಿ ಮಹತ್ವದ ನಿರ್ದೇಶನಗಳನ್ನು ನೀಡುವ ಮೂಲಕ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ.

ಕಲಬುರಗಿ ತಾಲೂಕಿನ ಕಾಳನೂರು ಗ್ರಾಮದ ಹನುಮಂತ ಎಂಬುವವರು ಒಂದೇ ಜಮೀನು ಎರಡು ಗ್ರಾಮಗಳ ಪ್ರತ್ಯೇಕ ಸರ್ವೇ ನಂಬರ್‌ಗಳಲ್ಲಿ ದಾಖಲಾಗಿರುವ ಕುರಿತು ಮಾಹಿತಿ ಕೋರಿ, ಜುಲೈ 27, 2013ರಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು.

ಜಾಪೂರ ಗ್ರಾಮದ ಸರ್ವೇ ನಂಬರ್ 62 ಹಾಗೂ ಕಾಳನೂರು ಗ್ರಾಮದ ಸರ್ವೇ ನಂಬರ್ 107ರಲ್ಲಿ ಕರದಾ ಶಂಕರಾವ್ ಅವರ ಹೆಸರಿನಲ್ಲಿ ದಾಖಲಾಗಿರುವ 70 ಎಕರೆ 7 ಗುಂಟೆ ಜಮೀನು ಒಂದೇ ಆಗಿದೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

ವಾಸ್ತವವಾಗಿ ಜಾಪೂರ ಗ್ರಾಮದ ಸರ್ವೇ ನಂಬರ್ 62ರಲ್ಲಿ ಪ್ರತ್ಯೇಕವಾಗಿ ಆ ಜಮೀನು ಅಸ್ತಿತ್ವದಲ್ಲಿಲ್ಲ. ಕಾಳನೂರು ಗ್ರಾಮದ ಸರ್ವೇ ನಂಬರ್ 107ರಲ್ಲಿರುವ 70 ಎಕರೆ 7 ಗುಂಟೆ ಜಮೀನು ಅದೇ ಭೂಮಿಯಾಗಿದೆ ಎಂದು ಭೂದಾಖಲೆಗಳ ಪರಿಶೀಲನೆಯಿಂದ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಜಾಪೂರ ಗ್ರಾಮದ ಸರ್ವೇ ನಂಬರ್ 62ರಲ್ಲಿ ಸರ್ಕಾರಿ ಗೈರಾಣ ಜಮೀನು ಎಂದು ಇರುವ ದಾಖಲೆಯನ್ನು ರದ್ದುಗೊಳಿಸಬೇಕು. ಅಲ್ಲದೆ, ಕಾಳನೂರು ಗ್ರಾಮದ ಸರ್ವೇ ನಂಬರ್ 107ರಲ್ಲಿರುವ 70 ಎಕರೆ 7 ಗುಂಟೆ ಜಮೀನನ್ನು 1961ರಲ್ಲಿ ಕರದಾ ಶಂಕರಾವ್ ಅವರ ಹೆಸರಿಗೆ ದಾಖಲಿಸಿರುವ ನಮೂದನ್ನು ರದ್ದುಗೊಳಿಸಿ, ಸದರಿ ಜಮೀನನ್ನು ಸರ್ಕಾರದ ಹೆಸರಿಗೆ ದಾಖಲಿಸುವುದು ಸೂಕ್ತ ಎಂದು ಕಲಬುರಗಿ ಭೂದಾಖಲೆಗಳ ಉಪನಿರ್ದೇಶಕರು ವರದಿ ಸಲ್ಲಿಸಿದ್ದಾರೆ.

ಈ ವರದಿಯ ಆಧಾರದಲ್ಲಿ ಕಲಬುರಗಿ ತಹಶೀಲ್ದಾರ್ ಆನಂದ ಶೀಲ ಅವರು ಅಕ್ಟೋಬರ್ 9, 2026ರಂದು ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅಕ್ಟೋಬರ್ 15ರಂದು ಮಾಹಿತಿ ಆಯೋಗದ ವಿಚಾರಣೆಗೆ ಹಾಜರಾದ ಅವರು, ಸಹಾಯಕ ಆಯುಕ್ತರಿಗೆ ಬರೆದ ಪತ್ರದ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.

ತಹಶೀಲ್ದಾರ್ ಸಲ್ಲಿಸಿದ ಪತ್ರ ಹಾಗೂ ಭೂದಾಖಲೆಗಳ ಉಪನಿರ್ದೇಶಕರ ವರದಿಯನ್ನು ಪರಿಶೀಲಿಸಿದ ಮಾಹಿತಿ ಆಯೋಗವು, ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳ ಆಧಾರದಲ್ಲಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತೆ ರೀತಿಕಾ ವರ್ಮಾ ಅವರಿಗೆ ನಿರ್ದೇಶನ ನೀಡಿದೆ.

ಮಾಹಿತಿ ಹಕ್ಕು ಅಧಿನಿಯಮ–2005ರ ಸೆಕ್ಷನ್ 18(3)ರಡಿ ಈ ನಿರ್ದೇಶನ ನೀಡಲಾಗಿದ್ದು, ಕೈಗೊಂಡ ಕ್ರಮಗಳ ಕುರಿತು 60 ದಿನಗಳೊಳಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅಲ್ಲದೆ, ಸಹಾಯಕ ಆಯುಕ್ತರು ಕೈಗೊಂಡ ಕ್ರಮಗಳ ಮಾಹಿತಿಯನ್ನು ಮೇಲ್ಮನವಿದಾರರಿಗೆ ಒದಗಿಸಬೇಕು. ಅವರಿಗೆ ನೀಡಿರುವ ಮಾಹಿತಿಯ ಪ್ರತಿ ಹಾಗೂ ಸ್ವೀಕೃತಿ ಪತ್ರವನ್ನು ಆಯೋಗಕ್ಕೆ ಸಲ್ಲಿಸುವಂತೆ ಕಲಬುರಗಿ ತಹಶೀಲ್ದಾರ್ ಆನಂದ ಶೀಲ ಅವರಿಗೆ ಆದೇಶಿಸಲಾಗಿದೆ.

ನಿಗದಿತ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಮಾಹಿತಿ ಹಕ್ಕು ಅಧಿನಿಯಮ–2005ರ ಸೆಕ್ಷನ್ 20(2)ರಡಿ ಕ್ರಮ ಕೈಗೊಳ್ಳುವ ಕುರಿತು ಆಯೋಗ ಎಚ್ಚರಿಕೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಉಪವಿಭಾಗದ ಸಹಾಯಕ ಆಯುಕ್ತರು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲು ಕಲಬುರಗಿ ಜಿಲ್ಲಾಧಿಕಾರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು, ಕಂದಾಯ ಇಲಾಖೆಯ ಆಯುಕ್ತರು ಹಾಗೂ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ–2005ರ ಸೆಕ್ಷನ್ 19(8)ರಡಿ ನಿರ್ದೇಶನ ನೀಡಲಾಗಿದೆ.

ಇದೇ ವೇಳೆ, ಸರ್ಕಾರಿ ಭೂಮಿಯ ದಾಖಲೆಗಳ ಕುರಿತು ಕೈಗೊಂಡ ಕ್ರಮಗಳ ಪಾಲನಾ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆಯೂ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ.

ಸುಮಾರು 13 ವರ್ಷಗಳಿಂದ ವಿಚಾರಣೆಯಲ್ಲಿದ್ದ ಪ್ರಕರಣದಲ್ಲಿ ತಹಶೀಲ್ದಾರ್ ಸಲ್ಲಿಸಿದ ವರದಿ ಹಾಗೂ ಸಹಾಯಕ ಆಯುಕ್ತರಿಗೆ ಬರೆದ ಪತ್ರವನ್ನು ಪರಿಗಣಿಸಿ, ಅದರಂತೆ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಪ್ರಕರಣವನ್ನು ವಿಲೇವಾರಿ ಮಾಡಿದೆ.