ರಾಯಚೂರು, ಅ.6: ಅಂಗನವಾಡಿ ನೌಕರರ ದೀರ್ಘಕಾಲದ ಬೇಡಿಕೆಗಳಿಗೆ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಐಸಿಡಿಎಸ್ ಯೋಜನೆಗೆ ಮೀಸಲಿಡುವ ಅನುದಾನವನ್ನು ಕಡಿತಗೊಳಿಸುವ ಮೂಲಕ ಯೋಜನೆಯ ಸ್ವರೂಪವನ್ನೇ ದುರ್ಬಲಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಕಾಂ. ಶಾಂತ ಘಂಟಿ ಆರೋಪಿಸಿದರು.

ನಗರದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಅಂಗನವಾಡಿ ನೌಕರರ ಸಂಘ ಸಿಐಟಿಯು ರಾಯಚೂರು ತಾಲೂಕು ಘಟಕದ 8ನೇ ಸಮ್ಮೇಳನವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅವರ ಮೂಲ ಕರ್ತವ್ಯಗಳ ಜೊತೆಗೆ ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ವಹಿಸಲಾಗುತ್ತಿದೆ. ಆದರೆ ಅವರಿಗೆ ನೀಡಲಾಗುತ್ತಿರುವ ಗೌರವಧನವನ್ನು ಜೀವನ ನಿರ್ವಹಣೆಗೆ ತಕ್ಕಂತೆ ಹೆಚ್ಚಿಸುವಲ್ಲಿ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸುವುದಾಗಿ ಸರ್ಕಾರ ಹೇಳುತ್ತಿದ್ದು, ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿಯೂ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳ ಅಸ್ತಿತ್ವ ಮತ್ತು ಕಾರ್ಯವ್ಯಾಪ್ತಿಯ ಮೇಲೆಯೇ ಪರಿಣಾಮ ಬೀರುವ ಆತಂಕವಿದೆ ಎಂದು ಹೇಳಿದರು.

ನೌಕರರಿಗೆ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗದ ರಕ್ಷಣೆಯನ್ನು ಖಚಿತಪಡಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಡಿ.1ರಿಂದ 3ರವರೆಗೆ ದೆಹಲಿಯಲ್ಲಿ ಸಂಸತ್ ಮುತ್ತಿಗೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ರಾಯಚೂರು ತಾಲೂಕಿನ ಅಂಗನವಾಡಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬಲ ತುಂಬಬೇಕು ಎಂದು ಕರೆ ನೀಡಿದರು.

ಮುಂಬರುವ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಅಂಗನವಾಡಿ ನೌಕರರ ಗೌರವಧನ ಮತ್ತು ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳದಿದ್ದರೆ, ಬಜೆಟ್ ಮಂಡನೆಯ ಮರುದಿನದಿಂದಲೇ ಸಂಸದರು ಹಾಗೂ ಶಾಸಕರ ಮನೆಗಳ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಕುರಿತು ಸಂಘಟನೆ ತೀರ್ಮಾನಿಸಿದೆ ಎಂದು ತಿಳಿಸಿದರು.

ಐಸಿಡಿಎಸ್ ಯೋಜನೆಯ ಉಳಿವು, ಅಂಗನವಾಡಿ ನೌಕರರ ಉದ್ಯೋಗ ಭದ್ರತೆ ಮತ್ತು ನ್ಯಾಯಯುತ ವೇತನಕ್ಕಾಗಿ ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಪ್ರತಿಯೊಬ್ಬ ನೌಕರರೂ ತಮ್ಮ ಹಕ್ಕುಗಳಿಗಾಗಿ ನಡೆಯುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಶಾಂತ ಘಂಟಿ ಮನವಿ ಮಾಡಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಎಚ್. ಪದ್ಮಾ ವಹಿಸಿದ್ದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಕರ್ನಾಟಕ ಪ್ರಾಂತ ರೈತ ಸಂಘದ ಕೆ.ಜಿ. ವೀರೇಶ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಖಜಾಂಚಿ ವರಲಕ್ಷ್ಮೀ ಹಾಗೂ ಎಸ್. ಗಂಗಮ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಎಚ್. ಪದ್ಮಾ ಸಂಘಟನೆಯ ಧ್ವಜಾರೋಹಣ ನೆರವೇರಿಸಿದರು.