ರಾಯಚೂರು: ನಗರದ ಎಲ್‌ಬಿಎಸ್ ನಗರದಲ್ಲಿ ಇತ್ತೀಚೆಗೆ ಹಾಡಹಗಲೇ ಹತ್ಯೆಗೀಡಾದ ವ್ಯಾಪಾರಿ ಬಾಪೂರು ನರಸಿಂಹ ಅವರ ಕುಟುಂಬಕ್ಕೆ ಕೊಪ್ಪಳದ ಆರ್ಯವೈಶ್ಯ ಸಮಾಜದ ಮುಖಂಡರು ₹1.50 ಲಕ್ಷ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೊಪ್ಪಳದಿಂದ ಆಗಮಿಸಿದ ಆರ್ಯವೈಶ್ಯ ಸಮಾಜದ ಮುಖಂಡರು ಮೃತ ನರಸಿಂಹ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕುಟುಂಬದ ಇಬ್ಬರು ಹೆಣ್ಣುಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸಂಗ್ರಹಿಸಿದ ₹1.50 ಲಕ್ಷ ಹಣವನ್ನು ಕುಟುಂಬಕ್ಕೆ ಹಸ್ತಾಂತರಿಸಿ, ಸಂಕಷ್ಟದ ಸಂದರ್ಭದಲ್ಲಿ ಇಡೀ ಸಮಾಜ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಆರ್ಯವೈಶ್ಯ ಸಮಾಜದ ಮುಖಂಡ ಆನಂದ ಶಿರಹಟ್ಟಿ, ರಾಯಚೂರಿನಲ್ಲಿ ಬಾಪೂರು ನರಸಿಂಹ ಅವರ ಹತ್ಯೆ ನಡೆದಿರುವ ಸುದ್ದಿ ತಿಳಿದು ತೀವ್ರ ನೋವಾಯಿತು. ಇಂತಹ ಸಂದರ್ಭದಲ್ಲಿ ಕೇವಲ ಸಂತಾಪ ಸೂಚಿಸುವುದಷ್ಟೇ ನಮ್ಮ ಕರ್ತವ್ಯವಾಗಬಾರದು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವುದು ಕೂಡ ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಘಟನೆ ಕುರಿತು ಕೊಪ್ಪಳದಲ್ಲಿ ಸಮಾಜದ ಮುಖಂಡರ ಸಭೆ ನಡೆಸಿ, ಮೃತರ ಕುಟುಂಬಕ್ಕೆ ನೆರವು ನೀಡಲು ತೀರ್ಮಾನಿಸಲಾಯಿತು. ಸಮಾಜದ ಬಾಂಧವರು ಸ್ವಯಂಪ್ರೇರಿತವಾಗಿ ನೀಡಿದ ಸಹಕಾರದಿಂದ ಅಲ್ಪಾವಧಿಯಲ್ಲಿಯೇ ₹1.50 ಲಕ್ಷ ಸಂಗ್ರಹವಾಯಿತು. ಈ ಮೊತ್ತವನ್ನು ಕುಟುಂಬಕ್ಕೆ ನೀಡಲಾಗಿದ್ದು, ಮೃತ ನರಸಿಂಹ ಅವರ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಹಣವನ್ನು ದೀರ್ಘಾವಧಿಯ ಠೇವಣಿಯಾಗಿ ಇಟ್ಟರೆ, ಬಡ್ಡಿ ಹಾಗೂ ಹೂಡಿಕೆಯ ಅವಧಿಗೆ ಅನುಗುಣವಾಗಿ ಮಕ್ಕಳು ವಯಸ್ಕರಾಗುವ ವೇಳೆಗೆ ಉತ್ತಮ ಮೊತ್ತ ಸಂಗ್ರಹವಾಗಬಹುದು. ಅದು ಅವರ ಶಿಕ್ಷಣ ಹಾಗೂ ಭವಿಷ್ಯದ ಅಗತ್ಯಗಳಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಯಚೂರು ಆರ್ಯವೈಶ್ಯ ಸಮಾಜದ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ಮಾತನಾಡಿ, ನರಸಿಂಹ ಅವರ ಹತ್ಯೆ ಘಟನೆಯಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಕೊಪ್ಪಳದ ಆರ್ಯವೈಶ್ಯ ಸಮಾಜದ ಮುಖಂಡರು ಸ್ವಯಂಪ್ರೇರಿತವಾಗಿ ಆಗಮಿಸಿ ಆರ್ಥಿಕ ನೆರವು ನೀಡಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕೊಪ್ಪಳದ ಸಮಾಜದ ಬಾಂಧವರು ಕೇವಲ ಹಣಕಾಸಿನ ನೆರವು ನೀಡದೆ, ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅವರ ಮಾತುಗಳು ಕುಟುಂಬಕ್ಕೆ ಆತ್ಮಸ್ಥೈರ್ಯ ನೀಡಿವೆ. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಇಂತಹ ಕುಟುಂಬಗಳ ನೆರವಿಗೆ ನಿಲ್ಲಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪಲುಗುಲ ನಾಗರಾಜ ಹಾಗೂ ವಿಜ್ಞಾನ ವೆಂಕಟೇಶ ಮಾತನಾಡಿ, ಬಾಪೂರು ನರಸಿಂಹ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕಾರ್ಯಕ್ರಮದಲ್ಲಿ ಕೊಪ್ಪಳದಿಂದ ಆಗಮಿಸಿದ ರಾಘವೇಂದ್ರ ಚಿತ್ರಾಲಿ, ಶ್ರೀನಿವಾಸ ವೇಮಲಿ, ಸೋಮನಾಥ ಮೆಣೆದಾಳ, ನಾಗಭೂಷಣ ವೇಮಲಿ, ಲಕ್ಷ್ಮಣ ಚೌದರಿ, ಗಂಗಾ ಸೋಮನಾಥ ಸೇರಿದಂತೆ ರಾಯಚೂರು ಆರ್ಯವೈಶ್ಯ ಸಮಾಜ, ಎಲ್‌ಬಿಎಸ್ ಆರ್ಯವೈಶ್ಯ ಸಂಘ ಹಾಗೂ ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.