ರಾಯಚೂರು: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಸಂಘಟನ್ ಸೃಜನ್ ಅಭಿಯಾನ–2’ರ ಅಂಗವಾಗಿ ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 14 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ನವೆಂಬರ್ 10ರೊಳಗೆ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಸ್ತುವಾರಿ ರಾಜಶೇಖರ ಪಾಟೀಲ್ ಹುಮನಾಬಾದ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನ್ ಸೃಜನ್ ಅಭಿಯಾನದ ಮೊದಲ ಹಂತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆರು ಮಂದಿ ಆಕಾಂಕ್ಷಿಗಳ ಪೈಕಿ ಮೂವರ ಹೆಸರನ್ನು ಅಂತಿಮ ಹಂತಕ್ಕೆ ಪರಿಗಣಿಸಲಾಗಿತ್ತು. ಬಳಿಕ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಕೆ. ಶಾಂತಪ್ಪ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.

ಎರಡನೇ ಹಂತದಲ್ಲಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ ಇಬ್ಬರಂತೆ ಒಟ್ಟು 14 ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಕೆಪಿಸಿಸಿ ಮಾರ್ಗಸೂಚಿಗಳ ಪ್ರಕಾರ ಪಕ್ಷದ ಹಿರಿಯ ಮುಖಂಡರು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸ್ಥಳೀಯ ಕಾರ್ಯಕರ್ತರು ಮತ್ತು ವಿವಿಧ ಸಮುದಾಯಗಳ ಪ್ರಮುಖರೊಂದಿಗೆ ಚರ್ಚಿಸಿ ಅರ್ಹರನ್ನು ಆಯ್ಕೆ ಮಾಡಲಾಗುವುದು ಎಂದರು.

ಅಧ್ಯಕ್ಷರ ನೇಮಕಾತಿ ಪೂರ್ಣಗೊಂಡ ಬಳಿಕ ಬ್ಲಾಕ್ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಈ ಪ್ರಕ್ರಿಯೆಯಲ್ಲಿ ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಆದ್ಯತೆ ನೀಡಲಾಗುತ್ತದೆ. ಜಿಲ್ಲೆಯ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು. ಸಂಘಟನೆಯಲ್ಲಿ ಸಕ್ರಿಯವಾಗಿ ದುಡಿಯುವವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಜಾನ್ ವೆಸ್ಲಿ ಮಾತನಾಡಿ, ಸಂಘಟನ್ ಸೃಜನ್ ಅಭಿಯಾನದ ಮೊದಲ ಹಂತದಲ್ಲಿ ಎಲ್ಲ ಜಾತಿ, ಧರ್ಮ ಹಾಗೂ ಸಮುದಾಯಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡಲಾಗಿದೆ. ಮೊದಲ ಹಂತದ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತದಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪಕ್ಷದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಜೊತೆಗೆ ಹೊಸದಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿರುವವರಿಗೂ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನೀಡಲು ಚಿಂತನೆ ನಡೆಸಲಾಗಿದೆ. ಯುವಕರು, ಮಹಿಳೆಯರು ಹಾಗೂ ಎಲ್ಲ ವರ್ಗದ ಜನರನ್ನು ಪಕ್ಷದ ಮುಖ್ಯವಾಹಿನಿಗೆ ತರುವ ಮೂಲಕ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಲಾಗುವುದು ಎಂದು ಹೇಳಿದರು.

ಆರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಶಾಂತಪ್ಪ ಮಾತನಾಡಿ, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14 ಬ್ಲಾಕ್ ಅಧ್ಯಕ್ಷರ ಆಯ್ಕೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪಕ್ಷದ ರಾಜ್ಯ ನಾಯಕತ್ವದ ಸೂಚನೆಯಂತೆ ಎಲ್ಲ ಮುಖಂಡರ ಸಹಕಾರದೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಕುಮಾರ ನಾಯಕ್, ಕಾಂಗ್ರೆಸ್ ಮುಖಂಡರಾದ ಜಯಣ್ಣ, ಶ್ರೀನಿವಾಸ್ ರೆಡ್ಡಿ, ಡಾ. ರಝಾಕ್ ಉಸ್ತಾದ್, ಸಾಜಿದ್ ಸಮೀರ್, ನರಸಿಂಹಲು ಮಡಗಿರಿ, ಶಿವಮೂರ್ತಿ, ನಿರ್ಮಲಾ ಬೆಣ್ಣೆ, ಪ್ರತಿಭಾ ರೆಡ್ಡಿ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.