ರಾಯಚೂರು, ಅ.9: ತಾಲೂಕಿನ ಮಮದಾಪುರ ಗ್ರಾಮದ ಶ್ರೀ ಗಧಾರ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ 13ನೇ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸರವಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಗಧಾರ ಮಾರಿಕಾಂಬ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪ್ರತಿದಿನ ದೇವಿಗೆ ವಿಶೇಷ ಪೂಜೆ, ಅಲಂಕಾರ, ಭಜನೆ, ಪ್ರವಚನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಅಕ್ಟೋಬರ್ 11ರಂದು ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಅ.12ರಂದು ಗಾನಸುಧಾ ಕಲಾಬಳಗದಿಂದ ಸಂಗೀತ ಕಾರ್ಯಕ್ರಮ, ಅ.13ರಂದು ವಿಶೇಷ ಸಂಗೀತ ಕಾರ್ಯಕ್ರಮ, ಅ.14ರಂದು ಗುರುಪಾದ ಪೂಜೆ ಹಾಗೂ ಅ.15ರಂದು ಸಂಜೆ 6.30ರಿಂದ ರಾತ್ರಿ 8.30ರವರೆಗೆ ಲಿಂಗಸುಗೂರಿನ ಹುಸೇನ್ ಸಾಬ್ ಅವರ ನೇತೃತ್ವದಲ್ಲಿ ಭಕ್ತಿ ಸಿಂಚನ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಅ.16ರಂದು ವಿಶೇಷ ಸತ್ಸಂಗ, ಅ.17ರಂದು ಕಲ್ಯಾಣ ನಾಡಿನ ಸಾಧಕರೊಂದಿಗೆ ಮಕ್ಕಳ ಸಂವಾದ, ಅ.18ರಂದು ಮಮದಾಪುರ ಹಾಗೂ ನೆಲಹಾಳ ಗ್ರಾಮದ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅ.19ರಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಶ್ವೇತಾ ಅಕ್ಕನವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ ಎಂದು ವಿವರಿಸಿದರು.

ಅಕ್ಟೋಬರ್ 20ರಂದು ಮಹಾನವಮಿ ಪ್ರಯುಕ್ತ ಆಯುಧ ಪೂಜೆ, ಭಜನೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 21ರಂದು ವಿಜಯದಶಮಿಯ ಅಂಗವಾಗಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಸಂಜೆ 5 ಗಂಟೆಗೆ ದೇವಿಯ ರಥೋತ್ಸವ ನಡೆಯಲಿದ್ದು, ರಥೋತ್ಸವದ ಪೂಜೆ ಹಾಗೂ ಚಾಲನೆ ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಹೋತ್ಸವದ ಪ್ರತಿದಿನ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಮಾಲಾಧಾರಿಗಳಿಂದ ದೇವಿಗೆ ವಿಶೇಷ ಅಭಿಷೇಕ, ಪೂಜೆ ಹಾಗೂ ಭಜನೆ ನಡೆಯಲಿದೆ. ಪ್ರತಿದಿನ ಅನ್ನದಾಸೋಹದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬೆಳಿಗ್ಗೆ 7ರಿಂದ 9 ಗಂಟೆಯವರೆಗೆ ದೇವಿಗೆ ಅಭಿಷೇಕ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಮಹೋತ್ಸವದ ಎಲ್ಲ ಕಾರ್ಯಕ್ರಮಗಳ ನಿರೂಪಣೆಯನ್ನು ಬಸವರಡ್ಡಿ ಯಾದವ್ ಪೊಲೀಸ್ ಪಾಟೀಲ್ ಅವರು ನಿರ್ವಹಿಸಲಿದ್ದು, ಹುಸೇನ್ ಸಾಬ್ ಲಿಂಗಸುಗೂರು ಅವರಿಂದ ಭಕ್ತಿಗೀತೆಗಳ ಕಾರ್ಯಕ್ರಮಗಳು ನಡೆಯಲಿವೆ. ಮಮದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಸರವಪ್ಪ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಮೇಶ್, ಮಂದಕಲ್, ಸುಗ್ರೀವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.