ರಾಯಚೂರು, ಅ.10: ನಗರದ ನವೋದಯ ಶಿಕ್ಷಣ ಸಂಸ್ಥೆಯ ನವೋದಯ ಎಫ್ಎಂ 88.4 ಕೇಂದ್ರದ ವತಿಯಿಂದ ಸಾಮಾನ್ಯ ಶಸ್ತ್ರಚಿಕಿತ್ಸೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅಕ್ಟೋಬರ್ 11ರಂದು ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನವೋದಯ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ರಾಜೇಶ ಕಕ್ಕೇರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಶಸ್ತ್ರಚಿಕಿತ್ಸೆಯ ಅಗತ್ಯತೆ, ಆಧುನಿಕ ಚಿಕಿತ್ಸಾ ವಿಧಾನಗಳು ಹಾಗೂ ಶಸ್ತ್ರಚಿಕಿತ್ಸೆಗೆ ಮುನ್ನ ಮತ್ತು ನಂತರ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಲಿದ್ದಾರೆ. ಶಸ್ತ್ರಚಿಕಿತ್ಸೆ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅನುಮಾನಗಳು ಮತ್ತು ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಸಾರ್ವಜನಿಕರು ಕಾರ್ಯಕ್ರಮದ ಅವಧಿಯಲ್ಲಿ ನೇರವಾಗಿ ದೂರವಾಣಿ ಕರೆ ಮಾಡಿ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ತಮ್ಮ ಸಂದೇಹಗಳಿಗೆ ತಜ್ಞ ವೈದ್ಯರಿಂದ ಮಾಹಿತಿ ಪಡೆದುಕೊಳ್ಳಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 91879 69142 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಸಾರ್ವಜನಿಕರು ಆಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ನವೋದಯ ಎಫ್ಎಂ ಕೇಂದ್ರದ ಮುಖ್ಯಸ್ಥ ಅಮರೇಶ ಆಶಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



