ರಾಯಚೂರು: ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಕ್ಟೋಬರ್ 24 ಮತ್ತು 25ರಂದು ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಸಾಹಿತಿ ರಾಮಣ್ಣ ಹವಳೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕುರಿತು ವಿಸ್ತೃತ ಚರ್ಚೆ ನಡೆಯಿತು. ಜಿಲ್ಲೆಯ ಸಾಹಿತಿಗಳಾದ ಗಿರಿರಾಜ್ ಹೊಸಮನಿ, ಮಹಾಂತೇಶ್ ನವಲ್ಕಲ್, ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಹಾಗೂ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿ ಅವರ ಹೆಸರುಗಳೂ ಚರ್ಚೆಗೆ ಬಂದವು.
ಅಂತಿಮವಾಗಿ ರಾಮಣ್ಣ ಹವಳೆ ಅವರ ಹೆಸರನ್ನು ಮಸ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಿದ್ಯಾವತಿ ವನಕಿ ಸೂಚಿಸಿದರು. ರಾಯಚೂರು ತಾಲೂಕು ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ ಹಾಗೂ ದೇವದುರ್ಗ ತಾಲೂಕು ಅಧ್ಯಕ್ಷ ಎಚ್. ಶಿವರಾಜ್ ಅವರು ಅನುಮೋದಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ರಾಮಣ್ಣ ಹವಳೆ ಅವರನ್ನು ಸರ್ವಾನುಮತದಿಂದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಘೋಷಿಸಿದರು.
ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಮಂಜುನಾಥ್ ಕಾಮಿನ್, ತಾಯಪ್ಪ ಬಿ. ಹೊಸೂರ, ಗೌರವ ಕೋಶಾಧ್ಯಕ್ಷ ನಾಗಪ್ಪ ಜಿ. ಹೊರಪ್ಯಾಟಿ, ಜಿಲ್ಲಾ ಸಹ ಕಾರ್ಯದರ್ಶಿ ಎಂಕಣ್ಣ ಯಾದವ್, ಸಂಘಟನಾ ಕಾರ್ಯದರ್ಶಿ ಮೈನುದ್ದಿನ್ ಕಾಟ್ಮಳ್ಳಿ, ಲಿಂಗಸುಗೂರು ತಾಲೂಕು ಅಧ್ಯಕ್ಷ ಡಾ. ಮಹದೇವಪ್ಪ ನಾಗರಾಳ, ಮೌನೇಶ್ ಹಣಗಿ, ಮಾನ್ವಿ ತಾಲೂಕು ಘಟಕದ ಪರವಾಗಿ ಕಾರ್ಯದರ್ಶಿ ಲಕ್ಷ್ಮಣ್ ಜಾನೇಕಲ್, ಜಿಲ್ಲಾ ಕಸಾಪ ವಿಶೇಷ ಆಹ್ವಾನಿತರಾದ ವಿ.ಎನ್. ಅಕ್ಕಿ, ಮಹಾಂತೇಶ್ ಮಸ್ಕಿ, ಜಿಲ್ಲಾ ಪ್ರತಿನಿಧಿಗಳಾದ ಪಿ. ಜಗದೀಶ್, ಯಶೋಧ ವೈ.ಕೆ. ಸೇರಿದಂತೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



