ರಾಯಚೂರು, ಸೆ.21: ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಕ್ಟೋಬರ್ 24 ಮತ್ತು 25ರಂದು ಹಮ್ಮಿಕೊಳ್ಳಲಾಗಿರುವ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಹಿರಿಯ ಸಾಹಿತಿ ರಾಮಣ್ಣ ಹವಳೆ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭಾನುವಾರ ಸಂಜೆ ಅವರ ಸ್ವಗೃಹಕ್ಕೆ ತೆರಳಿ ಅಭಿನಂದಿಸಿ ಗೌರವ ಸನ್ಮಾನ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮಣ್ಣ ಹವಳೆ, “ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ಸಂತಸದ ಸಂಗತಿ. ನನ್ನ ಮೇಲೆ ವಿಶ್ವಾಸವಿಟ್ಟು ಈ ಗೌರವ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಗೌರವ ಕಾರ್ಯದರ್ಶಿಗಳಾದ ತಾಯಪ್ಪ ಬಿ. ಹೊಸೂರ, ಮಂಜುನಾಥ ಕಾಮಿನ್, ಗೌರವ ಕೋಶಾಧ್ಯಕ್ಷ ನಾಗಪ್ಪ ಹೊರಪ್ಯಾಟಿ, ಸಾಹಿತಿಗಳಾದ ಬಾಬು ಭಂಡಾರಿಗಲ್, ಮಹಾಂತೇಶ್ ಮಸ್ಕಿ, ವಿ.ಎನ್. ಅಕ್ಕಿ, ಭೀಮನಗೌಡ ಇಟಿಗಿ, ಎಚ್.ಎಚ್. ಮ್ಯಾದಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ, ಗೌರವ ಕಾರ್ಯದರ್ಶಿಗಳಾದ ರಾವುತರಾವ್ ಬರೂರ, ಪ್ರತಿಭಾ ಗೋನಾಳ್, ಗೌರವ ಕೋಶಾಧ್ಯಕ್ಷ ಸೈಯದ್ ಹಫೀಜುಲ್ಲಾ ಖಾದ್ರಿ, ಡಾ. ಮಹದೇವಪ್ಪ ನಾಗರಾಳ್, ವೆಂಕಣ್ಣ ಯಾದವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



