ರಾಯಚೂರು: ಬಾಲ್ಯದಲ್ಲಿ ಕಾಣಿಸಿಕೊಳ್ಳುವ 12 ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಹುಟ್ಟಿನಿಂದ ಒಂದು ವರ್ಷದೊಳಗೆ ವಯಸ್ಸಿಗೆ ಅನುಗುಣವಾಗಿ ಎಲ್ಲ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು ಎಂದು ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗುಂಡಮ್ಮ ಪಾಲಕರಿಗೆ ಮನವಿ ಮಾಡಿದರು.
ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಂಗವಾಗಿ ನಗರದ ಅರಬ್ ಮೊಹಲ್ಲಾದ ಚುನ್ನಾಬಟ್ಟಿ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯದಲ್ಲಿ ಬರುವ ಕೆಲವು ರೋಗಗಳು ಜೀವಕ್ಕೆ ಅಪಾಯಕಾರಿಯಾಗಿದ್ದರೆ, ಇನ್ನೂ ಕೆಲವು ಮಕ್ಕಳನ್ನು ದೀರ್ಘಕಾಲ ಆರೋಗ್ಯ ಸಮಸ್ಯೆಗಳಿಗೆ ಒಳಪಡಿಸಬಹುದು. ಹೀಗಾಗಿ ಪಾಲಕರು ಮನೆಯ ಕೆಲಸದ ಒತ್ತಡದ ನಡುವೆಯೂ ಮಕ್ಕಳ ಲಸಿಕಾ ವೇಳಾಪಟ್ಟಿಯನ್ನು ತಪ್ಪಿಸಬಾರದು. ಮಗುವಿಗೆ ಎರಡು ವರ್ಷ ತುಂಬುವವರೆಗೆ ಪೂರಕ ಆಹಾರದೊಂದಿಗೆ ತಾಯಿಯ ಎದೆಹಾಲು ನೀಡುವುದನ್ನೂ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಎರಡನೇ ಮಗುವಿನ ಜನನಕ್ಕೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳುವುದು ಉತ್ತಮ. ಇದಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ವಿವಿಧ ಕುಟುಂಬ ಕಲ್ಯಾಣ ವಿಧಾನಗಳು ಉಚಿತವಾಗಿ ಲಭ್ಯವಿವೆ ಎಂದು ತಿಳಿಸಿದರು.
ಮಹಿಳೆಯರಿಗೆ ಕಾಪರ್-ಟಿ, ಮಾಲಾ-ಎನ್, ಛಾಯಾ ಮಾತ್ರೆಗಳು ಹಾಗೂ ಮೂರು ತಿಂಗಳಿಗೊಮ್ಮೆ ಪಡೆಯಬಹುದಾದ ಗರ್ಭನಿರೋಧಕ ಚುಚ್ಚುಮದ್ದು ಲಭ್ಯವಿದ್ದು, ಪುರುಷರಿಗೆ ಕಾಂಡೊಮ್ ಬಳಕೆಯ ಸೌಲಭ್ಯವಿದೆ. ಮಕ್ಕಳ ಸಂಖ್ಯೆ ಪೂರ್ಣಗೊಂಡ ದಂಪತಿಗಳಿಗೆ ಲ್ಯಾಪರೋಸ್ಕೋಪಿಕ್, ಟ್ಯೂಬೆಕ್ಟಮಿ ಹಾಗೂ ಪುರುಷರಿಗೆ ಎನ್ಎಸ್ವಿ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಲಭ್ಯವಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪುಂಡಲಿಕ ಗಂಜಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ., ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುನಿತಾ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಆಶಾ ಕಾರ್ಯಕರ್ತೆ ಹಂಪಮ್ಮ ಹಾಗೂ ತಾಯಂದಿರು ಉಪಸ್ಥಿತರಿದ್ದರು.



