ರಾಯಚೂರು: ದೇವದುರ್ಗ ತಾಲೂಕಿನ ಶಾವಂತಗೇರಾ ಮತ್ತು ಹೇಮನಾಳ ಗ್ರಾಮ ಪಂಚಾಯತಿಗಳಿಗೆ ಸುಮಾರು 11 ವರ್ಷಗಳಿಂದ ಚುನಾವಣೆ ನಡೆಯದಿರುವುದರಿಂದ ಸ್ಥಳೀಯ ಆಡಳಿತ ವ್ಯವಸ್ಥೆ ದುರ್ಬಲಗೊಂಡಿದ್ದು, ಗ್ರಾಮಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ತೊಂದರೆಯಾಗುತ್ತಿದೆ. ಆದ್ದರಿಂದ ಚುನಾವಣೆಗೆ ಇರುವ ಕಾನೂನು ಅಡೆತಡೆಗಳನ್ನು ನಿವಾರಿಸಿ ಶೀಘ್ರ ಚುನಾವಣೆ ನಡೆಸಬೇಕು ಎಂದು ಶಾವಂತಗೇರಾ ಮತ್ತು ಹೇಮನಾಳ ಗ್ರಾಮ ಪಂಚಾಯತಿ ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶಾವಂತಗೇರಾ ಮತ್ತು ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸಂಬಂಧಿಸಿದ ಗೊಂದಲ ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಚುನಾವಣೆ ನಡೆದಿಲ್ಲ ಎಂದು ಸಮಿತಿ ತಿಳಿಸಿದೆ. 2022ರಲ್ಲಿ ಕಂದಾಯ ಪ್ರಾದೇಶಿಕ ಆಯುಕ್ತರು ಯಥಾಸ್ಥಿತಿ ಕಾಪಾಡಿಕೊಂಡು ಚುನಾವಣೆ ನಡೆಸುವಂತೆ ಆದೇಶಿಸಿದ್ದರೂ, ನಂತರ ನ್ಯಾಯಾಲಯದಿಂದ ತಡೆಯಾಜ್ಞೆ ಬಂದ ಕಾರಣ ಚುನಾವಣೆ ಸ್ಥಗಿತಗೊಂಡಿದೆ. ತಡೆಯಾಜ್ಞೆ ತೆರವುಗೊಳಿಸಿ ಚುನಾವಣೆ ನಡೆಸಲು ಅಗತ್ಯ ಕಾನೂನು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಸಮಿತಿ ಆರೋಪಿಸಿದೆ.

ಚುನಾಯಿತ ಅಧ್ಯಕ್ಷರು ಮತ್ತು ಸದಸ್ಯರು ಇಲ್ಲದಿರುವುದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಇಲ್ಲದಂತಾಗಿದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಕಚೇರಿಗೆ ನಿಯಮಿತವಾಗಿ ಹಾಜರಾಗದಿರುವ ಕುರಿತು ದೂರುಗಳಿದ್ದು, ಇ-ಸ್ವತ್ತು, ಆಸ್ತಿ ನೋಂದಣಿ, ಖಾತೆ ಬದಲಾವಣೆ, ವಾಸಸ್ಥಳ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ಗ್ರಾಮಸ್ಥರು ಪರದಾಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯತಿ ಮಟ್ಟದಲ್ಲಿ ಚುನಾಯಿತ ಆಡಳಿತ ಇಲ್ಲದಿರುವುದರಿಂದ ಕೃಷಿ ಹೊಂಡ, ಚೆಕ್‌ಡ್ಯಾಂ, ತೋಟಗಾರಿಕೆ ಯೋಜನೆಗಳು, ಶೌಚಾಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಅನುಷ್ಠಾನಕ್ಕೂ ತೊಂದರೆಯಾಗುತ್ತಿದೆ. ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಚುನಾಯಿತ ಸ್ಥಳೀಯ ಆಡಳಿತ ಅತ್ಯಗತ್ಯ ಎಂದು ಸಮಿತಿ ಒತ್ತಾಯಿಸಿದೆ.

ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಜಿಲ್ಲಾಡಳಿತ ಕಾನೂನುಬದ್ಧ ಕ್ರಮ ಕೈಗೊಂಡು, ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶಾವಂತಗೇರಾ ಮತ್ತು ಹೇಮನಾಳ ಗ್ರಾಮ ಪಂಚಾಯತಿಗಳಿಗೂ ಚುನಾವಣೆ ನಡೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಮನವಿ ಸಲ್ಲಿಸಿದ 15 ದಿನಗಳೊಳಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎರಡೂ ಗ್ರಾಮ ಪಂಚಾಯತಿ ಕಚೇರಿಗಳಿಗೆ ಬೀಗಮುದ್ರೆ ಹಾಕುವ ಹೋರಾಟ ನಡೆಸಲಾಗುವುದು. ಅಲ್ಲದೆ, ಮುಂದಿನ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳನ್ನು ಬಹಿಷ್ಕರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ರಾಚಣ್ಣ ನಾಯಕ ಕೋಳೂರು, ರಾಜಪ್ಪಗೌಡ ಬಸವಂತಪೂರು, ವಿಜಯ ಭಂಡಾರಿ ಶಾವಂತಗೇರಾ, ಶರಣಪ್ಪ ಹಿರೇರಾಯಕುಂಪಿ, ಮೂರ್ತಿ ನಾಯಕ ಹೇಮನಾಳ, ಶಾಂತಕುಮಾರ ಹೊನ್ನಟಗಿ, ಕೆ. ಯಲ್ಲಪ್ಪ ಬೊಮ್ಮನಾಳ, ರಂಗಪ್ಪ ಹೇಮನಾಳ, ಪ್ರಭಾಕರ್ ಪಾಟೀಲ್ ಇಂಗಳದಾಳ, ಸುರೇಶಗೌಡ ಹಂಚಿನಾಳ, ಉಸ್ಮಾನ್ ಬಾಬ್ ಖಾನಪೂರು, ಹಂಪಣ್ಣ ಅಪ್ರಾಲ್ ಸೇರಿದಂತೆ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.