ರಾಯಚೂರು, ಅ.12: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಗದಿಪಡಿಸಬೇಕು. ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದ ಟಿಪ್ಪು ಸುಲ್ತಾನ್ ಗಾರ್ಡನ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಮುಖಂಡರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಕಳೆದ ಒಂಬತ್ತು ವರ್ಷಗಳಲ್ಲಿ ಗೌರವಧನ ಕೇವಲ ₹1,500 ಹೆಚ್ಚಿಸಲಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂದು ವರ್ಷದಿಂದ ಗೌರವಧನ ಹಾಗೂ ಪ್ರೋತ್ಸಾಹಧನ ಪಾವತಿಯಲ್ಲಿ ನಿರಂತರ ವಿಳಂಬವಾಗುತ್ತಿದೆ. ಹಲವು ತಿಂಗಳ ಬಾಕಿ ಹಣ ಬಿಡುಗಡೆಯಾಗದ ಕಾರಣ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ನೀಡಿರುವ ಭರವಸೆಗಳನ್ನು ವಿಳಂಬ ಮಾಡದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಆರೋಗ್ಯ ಇಲಾಖೆಯ ಸಮಸ್ತ ಆ್ಯಪ್ನಲ್ಲಿ ಕೆಲಸ ನಿರ್ವಹಿಸುವುದನ್ನು ಕಡ್ಡಾಯಗೊಳಿಸುವ ಮೊದಲು ಗುಣಮಟ್ಟದ ಮೊಬೈಲ್ ಅಥವಾ ಟ್ಯಾಬ್ಲೆಟ್ಗಳನ್ನು ಉಚಿತವಾಗಿ ಒದಗಿಸಬೇಕು. ಎನ್ಎಚ್ಎಂ ಮಾರ್ಗಸೂಚಿಗಳಲ್ಲಿ ಇಲ್ಲದ ನಿಕ್ಷಯ್ ಆ್ಯಪ್ ಕೆಲಸ ಹಾಗೂ ಕಫದ ಮಾದರಿ ಸಂಗ್ರಹಿಸಿ ತರುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇಲಾಖೆಯ ಆದೇಶದಂತೆ ಮಾಸಿಕ ₹5 ಸಾವಿರ ಗೌರವಧನ, ₹2 ಸಾವಿರ ಪ್ರೋತ್ಸಾಹಧನ ಹಾಗೂ ₹1 ಸಾವಿರ ಟಿಬಿಐ ಮೊತ್ತವನ್ನು ಕಡಿತವಿಲ್ಲದೆ ಪಾವತಿಸಬೇಕು. ಪ್ರತಿ ತಿಂಗಳ ಪಾವತಿ ವಿವರಗಳನ್ನು ಒದಗಿಸುವುದರ ಜೊತೆಗೆ ಕಳೆದ ಒಂದು ವರ್ಷದ ಸಂಪೂರ್ಣ ಲೆಕ್ಕಪತ್ರಗಳನ್ನು ಸಂಘಕ್ಕೆ ನೀಡಬೇಕು. ಹತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಥವಾ ಕೆಲಸ ತೊರೆದ ಕಾರ್ಯಕರ್ತೆಯರಿಗೆ ಇಡಿಗಂಟು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷೆ ಗೌರಮ್ಮ ಹೊಸಮನಿ, ಅಧ್ಯಕ್ಷೆ ಶೋಭಾ, ಮಹೇಶ್, ಅಣ್ಣಪ್ಪ ಶಿರಸ್ಯಾಡ್, ಈರಮ್ಮ ದೇವದುರ್ಗ, ಪ್ರಭಾವತಿ, ಮಲ್ಲಮ್ಮ, ಲವನಾ, ದೇವಮ್ಮ ಮಸ್ಕಿ, ಸುಜಾತಾ, ಭೀಮಮ್ಮ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.



