ರಾಯಚೂರು: ನಗರದ ಮಂತ್ರಾಲಯ ರಸ್ತೆಯಲ್ಲಿರುವ ಪೂರ್ಣಿಮಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಎಜಿಬಿ ಕಾಲೋನಿ ನಿವಾಸಿಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಸಂಘದ ಆಡಳಿತ ಮಂಡಳಿ ಪುನರ್ರಚನೆ, ಕಳೆದ ಎರಡು ವರ್ಷಗಳ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ಕಾಲೋನಿಯ ಮೂಲಸೌಕರ್ಯ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಎಜಿಬಿ ಕಾಲೋನಿ ಸಂಘದ ಅಧ್ಯಕ್ಷ ಬಸವರಾಜ್, ಕಳೆದ ಎರಡು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ಸಂಘದ ಎಲ್ಲ ಹಣಕಾಸು ವ್ಯವಹಾರಗಳನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಸಲಾಗಿದ್ದು, ಯಾವುದೇ ನಗದು ವ್ಯವಹಾರಗಳಿಗೆ ಅವಕಾಶ ನೀಡಿಲ್ಲ. ಸಂಘದ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗಿದ್ದು, ಲೆಕ್ಕಪರಿಶೋಧನಾ ವರದಿ ಹಾಗೂ ಹಣಕಾಸು ವಿವರಗಳನ್ನು ಸದಸ್ಯರ ಮುಂದೆ ಮಂಡಿಸಲಾಗಿದೆ ಎಂದು ತಿಳಿಸಿದರು.
ಸಂಘದ ನಿಯಮಾವಳಿಯಂತೆ ಪ್ರತಿವರ್ಷ ನವೀಕರಣ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಈ ಬಾರಿ ಸಂಪೂರ್ಣ ಹೊಸ ಆಡಳಿತ ಮಂಡಳಿಯನ್ನು ರಚಿಸುವ ಉದ್ದೇಶ ಹೊಂದಲಾಗಿದೆ. ಸಂಘದ ಮುಂದಿನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸದಸ್ಯರೆಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವೀಂದ್ರ ಜಲ್ದಾರ್, ಸಂಘದ ನಿಯಮ ಮತ್ತು ನಿಬಂಧನೆಗಳ ಪ್ರಕಾರ ಸಾಮಾನ್ಯ ಸಭೆಯಲ್ಲಿ ಶೇ.50ಕ್ಕಿಂತ ಹೆಚ್ಚು ಸದಸ್ಯರ ಹಾಜರಾತಿ ಅಗತ್ಯವಾಗಿದೆ. ಆದರೆ ನಿಗದಿತ ಸಂಖ್ಯೆಯ ಸದಸ್ಯರು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ನೂತನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ನೂತನ ಆಡಳಿತ ಮಂಡಳಿ ಆಯ್ಕೆಗಾಗಿ ನವೆಂಬರ್ 15, 2026ರಂದು ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಸಂಘದ ಎಲ್ಲ ಸದಸ್ಯರಿಗೆ ಮುಂಚಿತವಾಗಿ ನೋಟಿಸ್ ನೀಡಲಾಗುವುದು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿ ಹೊಸ ಆಡಳಿತ ಮಂಡಳಿ ರಚನೆಗೆ ಸಹಕರಿಸಬೇಕು ಎಂದು ಕೋರಿದರು.
ಸಭೆಯಲ್ಲಿ ಕಾಲೋನಿಯ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿ ಪ್ರಸ್ತಾಪವಾಗಿದ್ದು, ನಿವಾಸಿಗಳಿಗೆ ಸಮರ್ಪಕ ನೀರು ಪೂರೈಕೆಯಾಗದಿರುವುದರಿಂದ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಸದಸ್ಯರು ಗಮನ ಸೆಳೆದರು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಕೇಶವ ರೆಡ್ಡಿ, ರಾಜುಗೌಡ, ನರಸಿಂಗಪ್ಪ, ನರಸಿಂಹಲು, ಫಿರೋಜ್ ಸೇರಿದಂತೆ ಎಜಿಬಿ ಕಾಲೋನಿ ಸಂಘದ ಸದಸ್ಯರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.



