ರಾಯಚೂರು: ಹೆಗ್ಗಸನಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಐಜಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನ ಕೈಗಾರಿಕಾ ಚಟುವಟಿಕೆಗಳಿಗೆ ಸಂಬಂಧಿಸಿದ ಪರವಾನಿಗೆ, ಜಮೀನು ಬಳಕೆ, ಪರಿಸರ ಹಾಗೂ ಕಾರ್ಮಿಕರ ಬಾಕಿ ಸೌಲಭ್ಯಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅ.16ರಂದು ಕಂಪನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಲಾಗುವುದು ಎಂದು ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕಾರ್ಯನಿರ್ವಹಿಸಿದ್ದ ಮೈಸೂರು ಪೆಟ್ರೋ ಕೆಮಿಕಲ್ಸ್ ಹಾಗೂ ಪ್ರಸ್ತುತ ಐಜಿ ಪೆಟ್ರೋಕೆಮಿಕಲ್ಸ್ಗೆ ಸಂಬಂಧಿಸಿದ ವಿವಿಧ ಅನುಮತಿ ಮತ್ತು ದಾಖಲೆಗಳ ಕುರಿತು ಹಲವು ಅನುಮಾನಗಳಿವೆ. ಸಂಸ್ಥೆಯು ಹೊಂದಿರುವ ಪರವಾನಿಗೆ, ಎನ್ಒಸಿ ಹಾಗೂ ಪ್ರಮಾಣಪತ್ರಗಳನ್ನು ಸಂಬಂಧಪಟ್ಟ ಇಲಾಖೆಗಳ ಮೂಲ ದಾಖಲೆಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸಬೇಕು. ನಕಲಿ ಅಥವಾ ಕೃತಕ ದಾಖಲೆಗಳ ಬಳಕೆಯಾಗಿರುವುದು ತನಿಖೆಯಲ್ಲಿ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೈಸೂರು ಪೆಟ್ರೋ ಕೆಮಿಕಲ್ಸ್ನಲ್ಲಿ ಸುಮಾರು 98 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸಂಸ್ಥೆಯ ಚಟುವಟಿಕೆ ಸ್ಥಗಿತಗೊಂಡ ಬಳಿಕ ಬಾಕಿ ವೇತನ, ಪಿಎಫ್ ಹಾಗೂ ಇತರೆ ಕಾನೂನುಬದ್ಧ ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕೈಗಾರಿಕಾ ನ್ಯಾಯಮಂಡಳಿಯ ತೀರ್ಪಿನ ಅನುಷ್ಠಾನ ಸೇರಿದಂತೆ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳ ಕುರಿತು ಸರ್ಕಾರ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರಕರಣವು ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠದಲ್ಲಿರುವ ಹಿನ್ನೆಲೆಯಲ್ಲಿ ಅದರ ಪ್ರಸ್ತುತ ಸ್ಥಿತಿ ಹಾಗೂ ಮಧ್ಯಂತರ ಆದೇಶಗಳಿದ್ದರೆ ಅವುಗಳ ಪಾಲನೆಯಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ಮೈಸೂರು ಪೆಟ್ರೋ ಕೆಮಿಕಲ್ಸ್ ಮತ್ತು ಐಜಿ ಪೆಟ್ರೋಕೆಮಿಕಲ್ಸ್ ನಡುವೆ ಮಾಲೀಕತ್ವ, ನಿರ್ದೇಶಕತ್ವ, ನಿರ್ವಹಣೆ ಅಥವಾ ಇತರೆ ಕಾನೂನು ಸಂಬಂಧವಿದೆಯೇ ಎಂಬುದರ ಕುರಿತು ದಾಖಲೆ ಆಧಾರಿತ ತನಿಖೆ ನಡೆಸಬೇಕು ಎಂದರು.
ಸರ್ಕಾರದಿಂದ ನೀಡಲಾಗಿದೆ ಎನ್ನಲಾದ ಸುಮಾರು 108 ಎಕರೆ ಜಮೀನಿನ ಲೀಸ್ ಹಾಗೂ ಬಳಕೆಯ ಷರತ್ತುಗಳನ್ನು ಪರಿಶೀಲಿಸಬೇಕು. ಅಲ್ಲದೆ, ಸ್ಥಳೀಯ ರೈತರಿಂದ ಲೀಸ್ಗೆ ಪಡೆಯಲಾಗಿದೆ ಎನ್ನಲಾದ ಸುಮಾರು 500 ಎಕರೆ ಕೃಷಿ ಜಮೀನನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಮತ್ತು ಅದಕ್ಕೆ ಅಗತ್ಯ ಕಾನೂನುಬದ್ಧ ಅನುಮತಿಗಳನ್ನು ಪಡೆಯಲಾಗಿದೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಕೈಗಾರಿಕಾ ಚಟುವಟಿಕೆಗಳಿಂದ ಮಣ್ಣು, ನೀರು ಹಾಗೂ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುತ್ತಿದೆಯೇ ಎಂಬುದನ್ನು ತಜ್ಞ ಸಂಸ್ಥೆಗಳ ಮೂಲಕ ವೈಜ್ಞಾನಿಕವಾಗಿ ಪರೀಕ್ಷಿಸಬೇಕು. ಸ್ಥಳೀಯರಲ್ಲಿ ಉಸಿರಾಟ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ ಎಂಬ ಆರೋಪಗಳ ಬಗ್ಗೆಯೂ ಆರೋಗ್ಯ ಇಲಾಖೆ ವೈಜ್ಞಾನಿಕ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದರು.
KIADB, KSSIDC, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಖಾನೆ ಮತ್ತು ಕೈಗಾರಿಕಾ ಸುರಕ್ಷತಾ ಇಲಾಖೆ, ಜೆಸ್ಕಾಂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಸಂಸ್ಥೆಗೆ ನೀಡಲಾಗಿರುವ ಅನುಮತಿ ಹಾಗೂ ಎನ್ಒಸಿಗಳ ವಿವರಗಳನ್ನು ಪರಿಶೀಲಿಸಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖಾ ತಂಡ ರಚಿಸಿ ಸ್ಥಳ ಹಾಗೂ ದಾಖಲೆಗಳ ಪರಿಶೀಲನೆ ನಡೆಸಬೇಕು. ಅಗತ್ಯ ಕಾನೂನುಬದ್ಧ ಅನುಮತಿಗಳಿಲ್ಲದೆ ಕೈಗಾರಿಕಾ ಚಟುವಟಿಕೆ ನಡೆಯುತ್ತಿರುವುದು ಅಥವಾ ನಕಲಿ ದಾಖಲೆ ಬಳಕೆಯಾಗಿರುವುದು ತನಿಖೆಯಲ್ಲಿ ದೃಢಪಟ್ಟರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಾವೀದ್ ಖಾನ್ ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಕ್ಟೋಬರ್ 16ರಂದು ಐಜಿ ಪೆಟ್ರೋಕೆಮಿಕಲ್ಸ್ ಕಂಪನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಲಾಗುವುದು. ಕಾರ್ಮಿಕರ ಬಾಕಿ ಹಣ, ರೈತರ ಹಿತಾಸಕ್ತಿ ಹಾಗೂ ಸಾರ್ವಜನಿಕರ ಹಕ್ಕುಗಳಿಗೆ ನ್ಯಾಯ ದೊರೆಯುವವರೆಗೆ ಕಾನೂನುಬದ್ಧ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಪೆಟ್ರೋ ಕೆಮಿಕಲ್ಸ್ ಯೂನಿಯನ್ ಮುಖಂಡ ಸುರೇಶ್, ಮಾರುತಿ, ವಿಕಾಸ್, ಬಾಬುರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



