ರಾಯಚೂರು: ನಗರದ ಸರದಾರ ವಲ್ಲಭಭಾಯಿ ಪಟೇಲ್ ರಸ್ತೆಯಲ್ಲಿರುವ ಬಾಲರಾಮ ಶಾಲೆಯಲ್ಲಿ ಕಳೆದ 175 ವರ್ಷಗಳಿಂದ ಶುದ್ಧ ಮಣ್ಣಿನಿಂದ ಒಂದೇ ಮಾದರಿಯಲ್ಲಿ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸುವ ಸಂಪ್ರದಾಯ ಈ ವರ್ಷವೂ ಭಕ್ತಿಭಾವದಿಂದ ಮುಂದುವರಿಯಿತು.
ಗಣೇಶ ಚತುರ್ಥಿಯಿಂದ 15 ದಿನಗಳ ಕಾಲ ಪ್ರತಿದಿನ ವಿವಿಧ ಪೂಜೆ, ಪುನಸ್ಕಾರಗಳು ನಡೆದಿದ್ದು, ಸಾವಿರಾರು ಭಕ್ತರು ಆಗಮಿಸಿ ಗಣೇಶನ ದರ್ಶನ ಪಡೆದರು. ವಿಸರ್ಜನೆಗೆ ಮುನ್ನದ ದಿನ ಬಾಲರಾಮ ಶಾಲೆಯ ಸದ್ಭಕ್ತರಿಂದ ಅಹೋರಾತ್ರಿ ಶಿವಭಜನೆ ನಡೆಯಿತು.
ಮರುದಿನ ಹಿರಿಯರ ಮಾರ್ಗದರ್ಶನದಂತೆ ಯಾವುದೇ ಡಿಜೆ ಅಬ್ಬರ ಅಥವಾ ದುಂದುವೆಚ್ಚಕ್ಕೆ ಅವಕಾಶ ನೀಡದೆ, ಗಣೇಶ ಮೂರ್ತಿಯನ್ನು ಪಲ್ಲಕ್ಕಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ಭಕ್ತರ ಹೆಗಲ ಮೇಲೆ ಹೊತ್ತು ಸಾಂಪ್ರದಾಯಿಕವಾಗಿ ಮೆರವಣಿಗೆ ನಡೆಸಲಾಯಿತು. ಡೊಳ್ಳು, ಬಾಜಾ, ಭಜಂತ್ರಿ ಹಾಗೂ ಭಜನಾ ತಂಡಗಳ ಕನ್ನಡ ಮತ್ತು ತೆಲುಗು ತತ್ವಪದಗಳು, ಭಕ್ತಿಗೀತೆಗಳೊಂದಿಗೆ ಮೆರವಣಿಗೆ ಸಾಗಿತು.
ಬಾಲರಾಮ ಶಾಲೆಯಿಂದ ಆರಂಭವಾದ ಮೆರವಣಿಗೆ ಶಟ್ಟಿಭಾವಿ ವೃತ್ತ, ಪಟೇಲ್ ರಸ್ತೆ, ಸರದಾರ ವಲ್ಲಭಭಾಯಿ ಪಟೇಲ್ ವೃತ್ತ, ಲಕ್ಷ್ಮೀದೇವಿ ಕಲ್ಯಾಣ ಮಂಟಪ, ಕುಂಬಾರ ಓಣಿಯ ಬಸವಂತಪ್ಪ ಆಯಿಲ್ ಮಿಲ್ ಮಾರ್ಗವಾಗಿ ಬಸನಭಾವಿ ವೃತ್ತ ತಲುಪಿತು. ಬಳಿಕ ಅಲ್ಲಿರುವ ಶ್ರೀ ಮಾರುತಿ ದೇವಸ್ಥಾನದ ಬಾವಿಯಲ್ಲಿ ಸಂಪ್ರದಾಯದಂತೆ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಆಡಂಬರಕ್ಕಿಂತ ಸಂಪ್ರದಾಯ, ಭಕ್ತಿ ಮತ್ತು ಸರಳತೆಗೆ ಆದ್ಯತೆ ನೀಡುವ ಬಾಲರಾಮ ಶಾಲೆಯ ಈ ಗಣೇಶೋತ್ಸವ ಮತ್ತು ವಿಸರ್ಜನಾ ಪದ್ಧತಿ ಹಲವು ವರ್ಷಗಳಿಂದ ವಿಶಿಷ್ಟ ಪರಂಪರೆಯಾಗಿ ಮುಂದುವರಿದಿದೆ.
ಈ ಸಂದರ್ಭದಲ್ಲಿ ಬಾಲರಾಮ ಶಾಲೆ ಹಾಗೂ ಗಣೇಶ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ನೂರಾರು ಸದ್ಭಕ್ತರು ಉಪಸ್ಥಿತರಿದ್ದರು.



