ರಾಯಚೂರು, ಸೆ.19: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ರಾಯಚೂರು ವತಿಯಿಂದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ದತ್ತಿಯಡಿ ನೀಡಲಾಗುವ ದಿ. ಶ್ರೀಮತಿ ರಾಜಲಕ್ಷ್ಮಿ ರಾಮಚಂದ್ರಪ್ಪ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ಸೆ.20ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ.

ಈ ಬಾರಿಯ ಪ್ರಶಸ್ತಿಯನ್ನು ಬಳ್ಳಾರಿಯ ಕಾದಂಬರಿಕಾರ್ತಿ ಜಿ.ಎಂ. ರಾಜೇಶ್ವರಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಹಾಗೂ ರಾಯಚೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಸುಗುಣ ಸಿದ್ದನಗೌಡ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ವಹಿಸಲಿದ್ದಾರೆ. ರಾಯಚೂರು ಕಾನೂನು ವಿದ್ಯಾಲಯದ ಉಪನ್ಯಾಸಕಿ ವಸುಂದರ ಪಾಟೀಲ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಸಮಾರಂಭದಲ್ಲಿ ನಿವೃತ್ತ ಮುಖ್ಯಗುರು ದಾನಮ್ಮ ಎಸ್. ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಿ. ವಿಜಯ ರಾಜೇಂದ್ರ ಉಪಸ್ಥಿತರಿರುವರು.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತಾಯಪ್ಪ ಬಿ. ಹೊಸೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.