ರಾಯಚೂರು, ಅ.13: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಕಾರ್ಯನಿರ್ವಹಿಸಿದ ಗುತ್ತಿಗೆ ಕಾರ್ಮಿಕರ ಬಾಕಿ ವೇತನ ಪಾವತಿಸಲು ಕಾರ್ಮಿಕ ನ್ಯಾಯ ಪ್ರಾಧಿಕಾರ ಆದೇಶಿಸಿದ್ದು, ಅಕ್ಟೋಬರ್ 22ರೊಳಗೆ ಆದೇಶ ಜಾರಿಗೊಳಿಸುವುದರ ಜೊತೆಗೆ ಕಾರ್ಯಪಾಲಕ ಅಭಿಯಂತರರಾದ ವಿಜಯಲಕ್ಷ್ಮಿ ಪಾಟೀಲ ಅವರನ್ನು ಅಮಾನತುಗೊಳಿಸಬೇಕು ಎಂದು ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘದ (ಟಿಯುಸಿಐ) ಅಧ್ಯಕ್ಷ ಆರ್. ಮಾನಸಯ್ಯ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಎಡದಂಡೆ ಕಾಲುವೆಯ ನೀರು ಸರಬರಾಜು ಮತ್ತು 12 ಶಿಬಿರಗಳ ನಿರ್ವಹಣೆ ಗುತ್ತಿಗೆ ಗ್ಯಾಂಗ್ಮ್ಯಾನ್ ಕಾರ್ಮಿಕರ ಶ್ರಮದ ಮೇಲೆಯೇ ಅವಲಂಬಿತವಾಗಿದೆ. ನೀರಿನ ತುರ್ತು ಸಂದರ್ಭಗಳಲ್ಲಿ ಹಗಲಿರುಳು ದುಡಿಯುವ ಇವರಿಗೆ ಪ್ರತಿ ತಿಂಗಳು ವೇತನ ನೀಡದೆ, ಮೂರು ಅಥವಾ ಆರು ತಿಂಗಳಿಗೊಮ್ಮೆ ಪಾವತಿಸಲಾಗುತ್ತಿದೆ ಎಂದು ಆರೋಪಿಸಿದರು.
2025ರ ಏಪ್ರಿಲ್ 10ರಿಂದ ಜೂನ್ 30ರವರೆಗೆ ಕೆಲಸ ಮಾಡಿದ 222 ಕಾರ್ಮಿಕರ 80 ದಿನಗಳ ವೇತನವನ್ನು ತಡೆಹಿಡಿಯಲಾಗಿದೆ. ಈ ಸಂಬಂಧ ಸಿರವಾರದ ವಿಜಯಲಕ್ಷ್ಮಿ ಪಾಟೀಲ, ಸಿಂಧನೂರಿನ ಸತ್ಯನಾರಾಯಣ ಶೆಟ್ಟಿ ಹಾಗೂ ಯರಮರಸ್ ವಿಭಾಗದ ಕಾರ್ಯಪಾಲಕ ಅಭಿಯಂತರರ ವಿರುದ್ಧ ಸಂಘವು ವೇತನ ಪಾವತಿ ಕಾಯ್ದೆಯಡಿ ದಾವೆ ಹೂಡಿತ್ತು ಎಂದು ವಿವರಿಸಿದರು.
ಪ್ರಕರಣದ ವಿಚಾರಣೆ ಬಳಿಕ ಸೆಪ್ಟೆಂಬರ್ 22ರಂದು ಕಲಬುರಗಿಯ ಉಪ ಕಾರ್ಮಿಕ ಆಯುಕ್ತರ ಪ್ರಾಧಿಕಾರವು ಪ್ರತಿ ಕಾರ್ಮಿಕರಿಗೆ ₹40 ಸಾವಿರ ವೇತನ ಮತ್ತು ₹5,500 ಪರಿಹಾರ ಸೇರಿ ಒಟ್ಟು ₹1,01,01,000 ಹಣವನ್ನು ಒಂದು ತಿಂಗಳೊಳಗೆ ಪ್ರಾಧಿಕಾರದ ಖಾತೆಗೆ ಜಮೆ ಮಾಡುವಂತೆ ಆದೇಶಿಸಿದೆ ಎಂದು ತಿಳಿಸಿದರು.
ಕಾರ್ಮಿಕರು ಕೆಲಸ ಮಾಡಿಲ್ಲವೆಂದು ತೋರಿಸಿ ಅವರ ನ್ಯಾಯಬದ್ಧ ಕೂಲಿಯನ್ನು ನಿರಾಕರಿಸಲಾಗಿದೆ. ವರ್ಷಪೂರ್ತಿ ಕೆಲಸದ ಆದೇಶವಿದ್ದರೂ ನೀರು ನಿಲುಗಡೆ ಅವಧಿಯ ವೇತನ ನೀಡದಿರುವುದು ಅನ್ಯಾಯವಾಗಿದೆ. ನ್ಯಾಯ ಪ್ರಾಧಿಕಾರದ ತೀರ್ಪು ಕಾರ್ಮಿಕರ ಹೋರಾಟಕ್ಕೆ ದೊರೆತ ಮಹತ್ವದ ಗೆಲುವಾಗಿದೆ ಎಂದು ಹೇಳಿದರು.
ಯರಮರಸ್ನಿಂದ ಸಿರವಾರಕ್ಕೆ ವರ್ಗಾವಣೆಯಾಗಿ ಆರು ವರ್ಷಗಳಾದರೂ ಹಿಂದಿನ ಉಗ್ರಾಣದ ಪ್ರಭಾರವನ್ನು ಹಸ್ತಾಂತರಿಸಿಲ್ಲ ಎಂದು ವಿಜಯಲಕ್ಷ್ಮಿ ಪಾಟೀಲ ವಿರುದ್ಧ ಆರೋಪಿಸಿದ ಅವರು, ಅಕ್ಟೋಬರ್ 22ರೊಳಗೆ ಅವರನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಅಡವಿರಾವ್, ಹನುಮಂತಪ್ಪ ಲಿಂಗಸುಗೂರು, ಹನುಮಂತಪ್ಪ ಸಿರವಾರ, ಹನುಮಂತಪ್ಪ ಸಿಂಧನೂರು ಹಾಗೂ ಅಮರೇಗೌಡ ಉಪಸ್ಥಿತರಿದ್ದರು.



