ರಾಯಚೂರು: ತಾಲೂಕಿನ ದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ನೆರವಾಗುವ ಉದ್ದೇಶದಿಂದ ಗ್ರಾಮದ ದಾನಿ ದುಳ್ಳಯ್ಯ (ಕುಕನೂರು) ಅವರು ಸುಮಾರು ₹25 ಸಾವಿರಕ್ಕೂ ಅಧಿಕ ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.
ಎಸ್ಡಿಎಂಸಿ ಸದಸ್ಯ ಶಂಶುದ್ದೀನ್ ಅವರ ಸಹಕಾರದೊಂದಿಗೆ ಶಾಲೆಗೆ ಭೇಟಿ ನೀಡಿದ ದುಳ್ಳಯ್ಯ ಅವರು, 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಪರಿಷ್ಕೃತ ಕಲಿಕಾ ಫಲ ಆಧಾರಿತ ಮೌಲ್ಯಮಾಪನ ಪ್ರಶ್ನೆಕೋಠಿಯ (ಎಲ್ಬಿಎ) 60 ಪ್ರತಿಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ವಿತರಿಸಿದರು.
ಕಲ್ಯಾಣ ಕರ್ನಾಟಕ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭದಲ್ಲಿ ದುಳ್ಳಯ್ಯ ಅವರನ್ನು ಶಾಲೆಯ ಮುಖ್ಯಗುರುಗಳು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಪ್ರೌಢಶಾಲೆಯ ಮುಖ್ಯಗುರು ರಮಾದೇವಿ ಮಾತನಾಡಿ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಗ್ರಾಮದ ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಇಂತಹ ನೆರವು ದೊರೆತಾಗ ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಪ್ರಶ್ನೆಕೋಠಿಗಳನ್ನು ನೀಡುವ ಮೂಲಕ ದುಳ್ಳಯ್ಯ ಅವರು ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ. ಅವರ ಶಿಕ್ಷಣಪರ ಕಾಳಜಿ ಶ್ಲಾಘನೀಯ ಎಂದು ತಿಳಿಸಿ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಷ್ಟಗಳು ಸಾಧನೆಗೆ ಅಡ್ಡಿಯಾಗುವುದಿಲ್ಲ. ಪರಿಶ್ರಮ ಮತ್ತು ಬದ್ಧತೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಮಾದರಿಯಾಗಿಟ್ಟುಕೊಂಡು ಉತ್ತಮ ಸಾಧನೆ ಮಾಡಿ ಶಾಲೆ, ಗ್ರಾಮ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಾನಿ ದುಳ್ಳಯ್ಯ, ಶಿಕ್ಷಣಪ್ರೇಮಿ ರಾಜಪ್ಪಗೌಡ ಮಾಲಿಪಾಟೀಲ್, ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ನಾಯಕ್, ಸದಸ್ಯರಾದ ಶಂಸುದ್ದೀನ್, ನರೇಂದ್ರಗೌಡ, ಬಸವರಾಜ್ ಹೆಚ್., ನರಸಿಂಹ, ಎಂ. ನರಸಿಂಹ ಬಾಸ್, ಭೀಮಪ್ಪ, ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಿವರಾಜ್, ಸದಸ್ಯರಾದ ಭೀಮರಾಯ, ಎಂ. ಗೋಪಾಲ, ದೇಶಪ್ಪ, ಪ್ರಾಥಮಿಕ ಶಾಲೆಯ ಮುಖ್ಯಗುರು ಗೋಪಾಲ್ ರೆಡ್ಡಿ, ಶಿಕ್ಷಕರಾದ ಕೋದಂಡ ರೆಡ್ಡಿ, ರಶ್ಮಿ, ಡೇವಿಡ್, ಶಾಂತ ಹಿರೇಮಠ, ಮರಿಯಾ, ಎಂ. ಗಿರಿಯಪ್ಪ ದಿನ್ನಿ, ಶಿಲ್ಕಮ್ಮ, ಪ್ರಜ್ವಲ್, ವೆಂಕಟೇಶ್, ಭೀಮೇಶ್, ಜ್ಯೋತಿ, ಶೈಲಜಾ, ಶಾಹಿನ್ ಸೇರಿದಂತೆ ಅತಿಥಿ ಶಿಕ್ಷಕರು, ಗ್ರಾಮದ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.



