ರಾಯಚೂರು, ಅ. 25 (ಕರ್ನಾಟಕ ವಾರ್ತೆ): ಜಿಲ್ಲೆಯ ಗಣೇಕಲ್ ಸಮತೋಲನ ಜಲಾಶಯವನ್ನು ತುಂಬಿಸಲು ಅಕ್ಟೋಬರ್ 25ರ ಬೆಳಿಗ್ಗೆ 8 ಗಂಟೆಯಿಂದ ನವೆಂಬರ್ 4ರ ಬೆಳಿಗ್ಗೆ 8 ಗಂಟೆಯವರೆಗೆ ಸರದಿ ಪ್ರಕಾರ ಮೂರು ದಿನಗಳ ಅವಧಿಗೆ ದೊಡ್ಡ ವಿತರಣಾ ಕಾಲುವೆಗಳನ್ನು ಅರ್ಧದಷ್ಟು ಬಂದ್ ಮಾಡಿ, ಉಳಿದ ವಿತರಣಾ ಕಾಲುವೆಗಳನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಜಲಾಶಯಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಕ್ಟೋಬರ್ 25ರಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದಲ್ಲಿನ ಪ್ರಸ್ತುತ ನೀರಿನ ಲಭ್ಯತೆಗೆ ಅನುಗುಣವಾಗಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 108ನೇ ಮೈಲಿಯಲ್ಲಿರುವ ಕೆರೆಗಳನ್ನು ತುಂಬಿಸಲು ಪ್ರತಿ ವಿಭಾಗದಲ್ಲಿ ಸುಮಾರು 200 ಕ್ಯೂಸೆಕ್ಸ್ ನೀರನ್ನು ಹೆಚ್ಚುವರಿಯಾಗಿ ಹರಿಸಿ ಗಣೇಕಲ್ ಜಲಾಶಯವನ್ನು ತುಂಬಿಸಲಾಗುವುದು. ಗಣೇಕಲ್ ಭಾಗದ ರೈತರಿಗೆ ನೀರಾವರಿಗಾಗಿ ಒಂದು ಸರದಿಯ ನೀರು ಒದಗಿಸಲಾಗುವುದು. ಕುಡಿಯುವ ನೀರಿನ ಎಲ್ಲ ಕೆರೆಗಳನ್ನು ತುಂಬಿಸಿದ ಬಳಿಕ ಸುಮಾರು 15ರಿಂದ 16 ಅಡಿ ನೀರು ಉಳಿಯುವ ನಿರೀಕ್ಷೆಯಿದ್ದು, ಇದು ಮುಂದಿನ ಡಿಸೆಂಬರ್ ತಿಂಗಳಲ್ಲಿ ಕುಡಿಯುವ ನೀರಿನ ಅಗತ್ಯ ಪೂರೈಸಲು ಸಾಕಾಗಲಿದೆ ಎಂದರು.
ಗಣೇಕಲ್ ಜಲಾಶಯ ತುಂಬಿದ ನಂತರ ಸಿಂಧನೂರು, ಮಸ್ಕಿ, ಮಾನ್ವಿ ಹಾಗೂ ಅರಕೇರಾ ಭಾಗದ ಕುಡಿಯುವ ನೀರಿನ ಕೆರೆಗಳನ್ನು ಗರಿಷ್ಠ 13ರಿಂದ 14 ಅಡಿ ಮಟ್ಟದವರೆಗೆ ತುಂಬಿಸಿಕೊಳ್ಳಬೇಕಾಗುತ್ತದೆ. ಕೊನೆಯ ಐದಾರು ದಿನಗಳಲ್ಲಿ ನೀರಾವರಿಗೆ ಹರಿಯುವ ನೀರನ್ನು ಮಧ್ಯಭಾಗದಲ್ಲಿ ಬಳಸುವವರ ನೀರಿನ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಮೇಲ್ಭಾಗದಿಂದ ಸುಮಾರು 4,200 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ಇದೀಗ ಅದನ್ನು 3,800 ಕ್ಯೂಸೆಕ್ಸ್ಗೆ ಇಳಿಸಲಾಗಿದೆ. ಕುಡಿಯುವ ನೀರಿನ ಕೆರೆಗಳನ್ನೂ ಸಮಾನಾಂತರವಾಗಿ ತುಂಬಿಸುತ್ತಿರುವುದರಿಂದ ನೀರಾವರಿಗೆ ಲಭ್ಯವಾಗುವ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದೆ. ಸಾಧ್ಯವಾದಷ್ಟು ಮೇಲ್ಭಾಗದ ಹಾಗೂ ಮಧ್ಯಭಾಗದ ವಿತರಣಾ ಕಾಲುವೆಗಳ ಜೊತೆಗೆ ಕೆಳಭಾಗದ ರೈತರಿಗೂ ಸರದಿ ಪ್ರಕಾರ ನೀರು ಒದಗಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಕಾಲುವೆಗಳಲ್ಲಿ ನೀರಿನ ಅನಧಿಕೃತ ಬಳಕೆಯನ್ನು ತಡೆಯಲು ಕಟ್ಟುನಿಟ್ಟಿನ ನಿಷೇಧ ಜಾರಿಗೊಳಿಸಲಾಗುವುದು ಎಂದರು.
ಜಿಲ್ಲೆಯ ರೈತರು, ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳು ಐಸಿಸಿ ಸಭೆಯಲ್ಲಿ ಭಾಗವಹಿಸಿದ್ದು, ನೀರಿನ ಸಮರ್ಪಕ ಹಂಚಿಕೆಗೆ ಎಲ್ಲರೂ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ರೈತರು ರಸ್ತೆ ತಡೆ ಅಥವಾ ಇತರ ಪ್ರತಿಭಟನೆಗಳಿಗೆ ಮುಂದಾಗದೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



