ರಾಯಚೂರು: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಜೊತೆಗೆ ಪ್ರತಿಭಾವಂತರನ್ನು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ ಅಕ್ಟೋಬರ್ 29ರಂದು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಿಡ್ಜಾಮ್-2026 (NIDJAM) ಅಥ್ಲೆಟಿಕ್ಸ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಅಥ್ಲೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ 14 ಹಾಗೂ 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ತೋರುವ ಕ್ರೀಡಾಪಟುಗಳನ್ನು ಗುರುತಿಸಿ, ಅಸೋಸಿಯೇಷನ್ ಮೂಲಕ ರಾಜ್ಯಮಟ್ಟದ ಕ್ರೀಡಾಕೂಟಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

14 ವರ್ಷದೊಳಗಿನ ವಯೋಮಾನದ ಕ್ರೀಡಾಪಟುಗಳಿಗೆ ಟ್ರಯಥ್ಲಾನ್ ಮಾದರಿಯಲ್ಲಿ 60 ಮೀಟರ್ ಓಟ, ಉದ್ದಜಿಗಿತ, ಎತ್ತರಜಿಗಿತ, ಬಾಲ್ ಎಸೆತ ಹಾಗೂ 600 ಮೀಟರ್ ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ವಿಭಾಗದಲ್ಲಿ ಐದು ಮೀಟರ್ ಓಟದ ಅಂತರದಿಂದ ಕಿಡ್ಸ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ವಿವರಿಸಿದರು.

ಅದೇ ರೀತಿ 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ 60 ಮೀಟರ್ ಓಟ, ಹರ್ಡಲ್ಸ್, 600 ಮೀಟರ್ ಓಟ, ಉದ್ದಜಿಗಿತ, ಎತ್ತರಜಿಗಿತ, ಗುಂಡು ಎಸೆತ ಮತ್ತು ಈಟಿ ಎಸೆತ ಸ್ಪರ್ಧೆಗಳು ನಡೆಯಲಿವೆ. ಇದರೊಂದಿಗೆ ಪೆಂಟಾಥ್ಲಾನ್ ವಿಭಾಗದಲ್ಲಿಯೂ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, 14 ವರ್ಷದೊಳಗಿನ ವಿಭಾಗಕ್ಕೆ 2012ರ ನವೆಂಬರ್ 17ರಿಂದ 2014ರ ನವೆಂಬರ್ 16ರ ನಡುವೆ ಜನಿಸಿದವರು ಅರ್ಹರಾಗಿರುತ್ತಾರೆ. 16 ವರ್ಷದೊಳಗಿನ ವಿಭಾಗದಲ್ಲಿ 2010ರ ನವೆಂಬರ್ 17ರಿಂದ 2012ರ ನವೆಂಬರ್ 16ರ ನಡುವೆ ಜನಿಸಿದವರು ಭಾಗವಹಿಸಬಹುದು. 14 ವರ್ಷದೊಳಗಿನ ವಿಭಾಗದ ಸ್ಪರ್ಧಿಗಳಿಗೆ 2026ರ ನವೆಂಬರ್ 16ರ ವೇಳೆಗೆ ಕನಿಷ್ಠ 12 ವರ್ಷ ಪೂರ್ಣಗೊಂಡಿರಬೇಕು. ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಸ್ಪರ್ಧೆಯಲ್ಲಿ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಿಡ್ಜಾಮ್ ಕ್ರೀಡಾಕೂಟ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಮಹತ್ವದ ಅವಕಾಶವಾಗಿದೆ. ಕ್ರೀಡಾಪಟುಗಳು ಸ್ಪರ್ಧಾತ್ಮಕ ಮನೋಭಾವದಿಂದ ಪಾಲ್ಗೊಂಡು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಅರ್ಹ ಬಾಲಕ-ಬಾಲಕಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀನಿವಾಸ್ ರೆಡ್ಡಿ ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತಿಮ್ಮಾರೆಡ್ಡಿ, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.