ರಾಯಚೂರು: ಮುಂಬರುವ ಬೇಸಿಗೆಯಲ್ಲಿ ರಾಯಚೂರು ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ, ಈಗಿನಿಂದಲೇ 3 ಟಿಎಂಸಿ ನೀರನ್ನು ಕಾಯ್ದಿರಿಸಬೇಕು. ಜತೆಗೆ ನಾರಾಯಣಪುರ ಬಲದಂಡೆ ಕಾಲುವೆಯ ಕೊನೆಯಂಚಿನ ರೈತರಿಗೂ ಸಮರ್ಪಕವಾಗಿ ನೀರು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಒತ್ತಾಯಿಸಿದರು.
ಬೆಂಗಳೂರಿನ ವಿಕಾಸಸೌಧದಲ್ಲಿ ಗುರುವಾರ ಕೃಷ್ಣಾ ಮೇಲ್ದಂಡೆ ಯೋಜನೆಯ 2026-27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಮುಂಗಾರು ಹಂಗಾಮಿನ ಬಾಕಿ ನೀರು ಬಿಡುಗಡೆ, ಹಿಂಗಾರು ಬೆಳೆಗಳಿಗೆ ನೀರಾವರಿ ಸೌಲಭ್ಯ ಹಾಗೂ ಬೇಸಿಗೆಯ ಕುಡಿಯುವ ನೀರಿನ ಅಗತ್ಯತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ರಾಯಚೂರು ನಗರದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಬಳಿಕ ಪರಿಹಾರ ಹುಡುಕುವುದಕ್ಕಿಂತ ಮುಂಚಿತವಾಗಿಯೇ ಅಗತ್ಯ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಸೂಕ್ತ. ಈ ಹಿನ್ನೆಲೆಯಲ್ಲಿ ನಗರದ ಕುಡಿಯುವ ನೀರಿನ ಬೇಡಿಕೆ ಪೂರೈಸಲು 3 ಟಿಎಂಸಿ ನೀರನ್ನು ಮೀಸಲಿಡುವಂತೆ ಸಚಿವರು ಮನವಿ ಮಾಡಿದರು.
ದೇವದುರ್ಗ ಭಾಗದಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ಕೊನೆಯಂಚಿನ ರೈತರಿಗೆ ನೀರು ತಲುಪಿಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನೂ ಸಭೆಯ ಗಮನಕ್ಕೆ ತಂದರು. ಕಾಲುವೆ ಗೇಟ್ಗಳ ಕಾರ್ಯಾಚರಣೆ ಹಾಗೂ ನೀರಿನ ಮಟ್ಟದ ನಿರ್ವಹಣೆಯಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ನೀರಿನ ಹಂಚಿಕೆಯಲ್ಲಿ ಸಮರ್ಪಕ ವ್ಯವಸ್ಥೆ ಜಾರಿಗೊಳಿಸಿ ಕೊನೆಯಂಚಿನ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿತರಣಾ ಕಾಲುವೆ ಸಂಖ್ಯೆ 1ರಿಂದ 14ರವರೆಗೆ ಕೈಗೊಳ್ಳಲಾಗುತ್ತಿರುವ ಸ್ಕಾಡಾ (SCADA) ತಂತ್ರಜ್ಞಾನ ಆಧಾರಿತ ಗೇಟ್ ಅಳವಡಿಕೆಯ ಮೊದಲ ಹಂತದ ಕಾಮಗಾರಿಯೊಂದಿಗೆ 15ರಿಂದ 18ರವರೆಗಿನ ಕಾಲುವೆಗಳಲ್ಲಿ ಎರಡನೇ ಹಂತದ ಕಾಮಗಾರಿಯನ್ನೂ ತ್ವರಿತವಾಗಿ ಆರಂಭಿಸಬೇಕು. ಇದರಿಂದ ನೀರಿನ ಹರಿವಿನ ಮೇಲೆ ಪರಿಣಾಮಕಾರಿ ನಿಗಾ ವಹಿಸುವುದರ ಜೊತೆಗೆ ಅನಗತ್ಯ ನೀರಿನ ಪೋಲು ತಡೆಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜೇವರ್ಗಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಲುವೆಗಳ ಕೊನೆಯ ಭಾಗದಲ್ಲಿರುವ ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪದಿರುವುದರಿಂದ ಜನರು ಹಾಗೂ ಜಾನುವಾರುಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ಕುಡಿಯುವ ನೀರು ಮತ್ತು ಅಗತ್ಯ ಬಳಕೆಗಾಗಿ ಮುಂಬರುವ ಬೇಸಿಗೆಯವರೆಗೆ 2.5 ಟಿಎಂಸಿ ನೀರು ಕಾಯ್ದಿರಿಸಬೇಕು ಎಂದು ಸಚಿವರು ಬೇಡಿಕೆ ಮಂಡಿಸಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 85.61 ಟಿಎಂಸಿ ಬಳಕೆಗೆ ಲಭ್ಯವಿರುವ ನೀರಿನ ಹಿನ್ನೆಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ನೀರು ಬಿಡುಗಡೆಯ ಅವಧಿಯನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಕ್ಟೋಬರ್ 26ರಿಂದ ನವೆಂಬರ್ 2ರವರೆಗೆ ಕಾಲುವೆಗಳಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ನವೆಂಬರ್ 3ರಿಂದ 12ರವರೆಗೆ ಮತ್ತೆ ಹತ್ತು ದಿನಗಳ ಕಾಲ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.
ಹಿಂಗಾರು ಹಂಗಾಮಿನ ನೀರಾವರಿಗೆ ಅಗತ್ಯ ಪ್ರಮಾಣದ ನೀರು ಲಭ್ಯವಿಲ್ಲದ ಕಾರಣ ಹಿಂಗಾರು ಬೆಳೆಗಳಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಸಭೆ ಬಂದಿತು. ಉಳಿದ ನೀರನ್ನು ಕುಡಿಯುವ ನೀರು, ಕೆರೆಗಳ ಭರ್ತಿ ಹಾಗೂ ಇತರ ಅತ್ಯಗತ್ಯ ಬಳಕೆಗಳಿಗೆ ಮೀಸಲಿಡಲು ತೀರ್ಮಾನಿಸಲಾಯಿತು.
ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಮಾಡಲು ಅನಧಿಕೃತವಾಗಿ ನೀರು ಎತ್ತುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ನಿರಂತರ ನಿಗಾ ವಹಿಸುವಂತೆ ಸೂಚಿಸಲಾಯಿತು.
ಲಭ್ಯವಿರುವ ನೀರಿನ ಪ್ರತಿಯೊಂದು ಹನಿಯನ್ನೂ ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯ. ಹಳೆಯ ಕಾಲುವೆಗಳ ಆಧುನೀಕರಣ ಹಾಗೂ ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆಗೆ ಆದ್ಯತೆ ನೀಡುವ ಮೂಲಕ ರಾಯಚೂರು ಮತ್ತು ಜೇವರ್ಗಿ ಭಾಗದ ಜನರು, ಜಾನುವಾರುಗಳು ಹಾಗೂ ಕೊನೆಯಂಚಿನ ರೈತರ ನೀರಿನ ಅಗತ್ಯತೆ ಪೂರೈಸಬೇಕು ಎಂದು ಡಾ. ಅಜಯ್ ಧರ್ಮಸಿಂಗ್ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಜಿ. ಕುಮಾರ್ ನಾಯಕ್, ಶಾಸಕರಾದ ಉಮೇಶ್ ಮೇಟಿ, ಜೆ.ಟಿ. ಪಾಟೀಲ್, ಜಗದೀಶ್ ಗುಡಗುಂಟಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.



