ರಾಯಚೂರು, ಅ.1: ದಾಸ ಸಾಹಿತ್ಯದ ಮೂಲಕ ಆಧ್ಯಾತ್ಮಿಕ ಚಿಂತನೆ ಮತ್ತು ಭಕ್ತಿಯ ಸಂದೇಶವನ್ನು ಜನರಿಗೆ ಪಸರಿಸಿದ ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣಾರ್ಥ ಅ.3 ಮತ್ತು 4ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎರಡು ದಿನಗಳ ‘ಗೋವಿಂದ ಗಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹರಿದಾಸ ಸೇವಾ ಇಂಟರ್‌ನ್ಯಾಷನಲ್ ಬೆಂಗಳೂರು ಅಧ್ಯಕ್ಷ ಹಾಗೂ ಗಾಯಕ ಶೇಷಗಿರಿದಾಸ ರಾಯಚೂರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ದಿನ ಸಂಜೆ 4.30ರಿಂದ ಭಜನೆ, ದಾಸವಾಣಿ, ಉಪನ್ಯಾಸ, ಆಶೀರ್ವಚನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಧಕರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅ.3ರಂದು ಸಂಜೆ 4.30ಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎನ್.ಎಸ್. ಬೋಸರಾಜ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರ ನಾಯಕ್, ಶಾಸಕ ಡಾ. ಶಿವರಾಜ ಪಾಟೀಲ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಅ.4ರಂದು ಮಂತ್ರಾಲಯದ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಲಿದ್ದಾರೆ. ಇದೇ ದಿನ 500 ಮಹಿಳೆಯರಿಂದ ಸಮೂಹ ಗಾಯನ ನಡೆಯಲಿದ್ದು, ಕಲಾಕುಂಚ, ಭರತನಾಟ್ಯ, ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ನೀಡಲಿವೆ ಎಂದು ಹೇಳಿದರು.

ದಾಸ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ವಿಶೇಷ ಕೊಡುಗೆ ನೀಡಿರುವ ಕಲಬುರಗಿಯ ಖ್ಯಾತ ಸಂಶೋಧಕ ಹಾಗೂ ಚಿಂತಕ ಡಾ. ಸ್ವಾಮಿರಾವ್ ಕುಲಕರ್ಣಿ ಅವರಿಗೆ ಈ ವರ್ಷದ ‘ಶ್ರೀ ಗೋವಿಂದ ವಿಠಲ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಇದೇ ಸಂದರ್ಭದಲ್ಲಿ ಅನಂತರಾವ ಸರಾಫ, ನಾರಾಯಣಪೇಟದ ಶಕ್ತಿ ಪೀಠಂ ಶಾಂತ ಮಠದ ಸ್ವಾಮಿ ಶಾಂತನಂದ ಪುರೋಹಿತ, ವೈದ್ಯ ಡಾ. ಅನಿರುದ್ಧ ಕುಲಕರ್ಣಿ ಹಾಗೂ ಕಾಂತಾಚಾರ್ಯ ಅರಿಶಿಣಗಿ ಅವರನ್ನು ಅವರ ಸೇವೆ ಮತ್ತು ಸಾಧನೆ ಗುರುತಿಸಿ ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಹರಿದಾಸ ಪರಂಪರೆ ಹಾಗೂ ದಾಸ ಸಾಹಿತ್ಯದ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಆಶಯದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಭಕ್ತರು, ದಾಸ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶೇಷಗಿರಿದಾಸ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಮುರುಳಿಧರ್ ಕುಲಕರ್ಣಿ ಉಪಸ್ಥಿತರಿದ್ದರು.