ರಾಯಚೂರು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸೆ.30ರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಕೈಬಿಡಬೇಕು. ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅ.1ರಿಂದ ಸಹಮನಸ್ಕ ಸಂಘಟನೆಗಳೊಂದಿಗೆ ರಾಷ್ಟ್ರಮಟ್ಟದ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ಎಸ್ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಶರಣಕುಮಾರ್ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಇತ್ತೀಚಿನ ಕಾರ್ಯನಿರ್ವಹಣೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಹಲವು ಪ್ರಶ್ನೆಗಳಿಗೆ ಕಾರಣವಾಗಿವೆ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಆಯೋಗದ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಅನುಮಾನಗಳಿಗೆ ಸೂಕ್ತ ಉತ್ತರ ದೊರೆಯಬೇಕಾಗಿದೆ ಎಂದರು.
ಎಸ್ಐಆರ್ ಜಾರಿಯಿಂದ ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈತಪ್ಪುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, ಅದರಲ್ಲೂ ದುರ್ಬಲ ಮತ್ತು ಶೋಷಿತ ಸಮುದಾಯಗಳಿಗೆ ತೊಂದರೆಯಾಗುವ ಸಾಧ್ಯತೆಯನ್ನು ನಿರ್ಲಕ್ಷಿಸುವಂತಿಲ್ಲ. ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕು ಸುರಕ್ಷಿತವಾಗುವಂತೆ ಪಾರದರ್ಶಕ ಹಾಗೂ ನಿಯಮಬದ್ಧ ಕ್ರಮ ಅನುಸರಿಸಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗದಲ್ಲಿರುವ ಮೂವರು ಆಯುಕ್ತರು ಸಾಂವಿಧಾನಿಕ ಜವಾಬ್ದಾರಿಯನ್ನು ಸಮಾನವಾಗಿ ನಿರ್ವಹಿಸಬೇಕು. ಮಹತ್ವದ ತೀರ್ಮಾನಗಳನ್ನು ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಕೈಗೊಳ್ಳುವುದು ಅಗತ್ಯ. ಎಸ್ಐಆರ್ ಸೇರಿದಂತೆ ಕೆಲವು ವಿಷಯಗಳಲ್ಲಿ ಆಯೋಗದೊಳಗೆ ಭಿನ್ನಾಭಿಪ್ರಾಯಗಳಿವೆ ಎಂಬ ಆರೋಪಗಳು ಕೇಳಿಬರುತ್ತಿರುವುದರಿಂದ, ನಿರ್ಧಾರ ಕೈಗೊಳ್ಳುವ ವಿಧಾನ ಮತ್ತು ಅದರ ಆಧಾರದ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಟೀಕಿಸಿದ ಶರಣಕುಮಾರ್, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಮಹತ್ವದ್ದಾಗಿದ್ದು, ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಈ ಕಾರಣದಿಂದ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ಹಿಂಪಡೆಯಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಮತದಾರರ ಹಕ್ಕುಗಳ ವಿಷಯದಲ್ಲಿ ರಾಜಕೀಯ ಪಕ್ಷಗಳು ಕೇವಲ ಹೇಳಿಕೆಗಳು ಮತ್ತು ಸಾಂಕೇತಿಕ ಪ್ರತಿಭಟನೆಗಳಿಗೆ ಸೀಮಿತವಾಗಬಾರದು. ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಮತದಾರರ ಪಟ್ಟಿ ಸಮರ್ಪಕವಾಗಿ ಪರಿಷ್ಕರಣೆಯಾಗುವಂತೆ ಸಂಘಟಿತವಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಬೇಡಿಕೆಗಳಿಗೆ ಸೆ.30ರೊಳಗೆ ಸ್ಪಂದನೆ ದೊರೆಯದಿದ್ದಲ್ಲಿ ಅ.1ರಿಂದ ವಿವಿಧ ಸಹಮನಸ್ಕ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ರಾಷ್ಟ್ರವ್ಯಾಪಿ ಆಂದೋಲನ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾರೆಪ್ಪ ಹರವಿ, ಜಾನ್ ವೆಸ್ಲಿ, ಅಸಿಮುದ್ದಿನ್, ಖಾಜಾ ಅಸ್ಲಾಂ, ಆಂಜಿನೇಯ್ಯ ಕುರಬದೊಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



