ದೇವದುರ್ಗ, ಅ.31: ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ ನೀರಿನ ಕೊರತೆಯಿಂದ ರೈತರು ಬೆಳೆದಿರುವ ಭತ್ತ ಹಾಗೂ ಮೆಣಸಿನಕಾಯಿ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆ ಬೆಳೆದಿರುವ ರೈತರ ಹಿತದೃಷ್ಟಿಯಿಂದ ಜನವರಿ ಅಂತ್ಯದವರೆಗೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ನವೆಂಬರ್ 16ರಂದು ಸಿರವಾರ ಕ್ರಾಸ್ ಬಳಿ ಜೆಡಿಎಸ್ ವತಿಯಿಂದ ಬೃಹತ್ ರೈತ ರ್ಯಾಲಿ ಹಾಗೂ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಬೆಳೆಗಳ ರಕ್ಷಣೆಗೆ ಅಗತ್ಯವಿರುವಷ್ಟು ನೀರು ಒದಗಿಸುವ ಭರವಸೆ ನೀಡಿದ್ದರೂ ನವೆಂಬರ್ 12ರಿಂದ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಲು ಮುಂದಾಗಿರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಬೆಳೆಗಳು ಕಟಾವಿಗೆ ಬರುವ ಮುನ್ನವೇ ನೀರು ನಿಲ್ಲಿಸಿದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ದೇವದುರ್ಗ ಮತ್ತು ಅರಕೇರಾ ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 30 ಸಾವಿರ ಹೆಕ್ಟೇರ್ನಲ್ಲಿ ಭತ್ತ ಹಾಗೂ 6 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಗಳನ್ನು ಬೆಳೆಯಲಾಗಿದೆ. ಹತ್ತಿ ಬೆಳೆ ಈಗಾಗಲೇ ಫಸಲು ನೀಡುವ ಹಂತದಲ್ಲಿದ್ದರೂ ಭತ್ತಕ್ಕೆ ಕನಿಷ್ಠ ಡಿಸೆಂಬರ್ ಅಂತ್ಯದವರೆಗೆ ನೀರಿನ ಅವಶ್ಯಕತೆಯಿದೆ. ಮೆಣಸಿನಕಾಯಿ ಬೆಳೆಗೆ ಜನವರಿವರೆಗೂ ನೀರು ಪೂರೈಕೆಯಾಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕಾಲುವೆ ನೀರು ಸ್ಥಗಿತಗೊಳಿಸುವ ನಿರ್ಧಾರ ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಶೇಷವಾಗಿ ಮೆಣಸಿನಕಾಯಿ ಬೆಳೆಯಲು ರೈತರು ಪ್ರತಿ ಎಕರೆಗೆ ಸುಮಾರು ₹1 ಲಕ್ಷದವರೆಗೆ ಖರ್ಚು ಮಾಡಿದ್ದಾರೆ. ಕೆಲವರು ಸ್ವಂತ ಜಮೀನಿನ ಜೊತೆಗೆ 10ರಿಂದ 20 ಎಕರೆವರೆಗೆ ಭೂಮಿಯನ್ನು ಗುತ್ತಿಗೆ ಪಡೆದು ಕೃಷಿ ಕೈಗೊಂಡಿದ್ದಾರೆ. ಬೀಜ, ಗೊಬ್ಬರ, ಔಷಧ, ಕೂಲಿ ಹಾಗೂ ಇತರ ಕೃಷಿ ವೆಚ್ಚಗಳಿಗಾಗಿ ಸಾಕಷ್ಟು ಹಣ ಹೂಡಿಕೆ ಮಾಡಿದ್ದಾರೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಫಸಲು ಕೈ ಸೇರುವ ನಿರೀಕ್ಷೆಯಲ್ಲಿರುವ ರೈತರಿಗೆ ಈಗ ನೀರಿನ ಅಭಾವ ಎದುರಾಗುವ ಸಾಧ್ಯತೆ ಉಂಟಾಗಿದೆ. ಈ ಹಂತದಲ್ಲಿ ಬೆಳೆಗಳು ಹಾನಿಗೊಳಗಾದರೆ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಅಪಾಯವಿದೆ ಎಂದು ವಿವರಿಸಿದರು.
ಈಗಾಗಲೇ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರು ಸಾಲದ ಹೊರೆ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಂದ ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀರಾವರಿ ಸೌಲಭ್ಯವಿದ್ದರೂ ಬೆಳೆಗಳಿಗೆ ಅಗತ್ಯ ನೀರು ದೊರೆಯದಂತಾದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುವ ಪರಿಸ್ಥಿತಿಯನ್ನು ತಪ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬೆಳೆಗಳ ಬೆಳವಣಿಗೆ ಮತ್ತು ಕಟಾವಿನ ಅವಧಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ನೀರು ಬಿಡುಗಡೆಗೆ ಸೂಕ್ತ ವೇಳಾಪಟ್ಟಿ ರೂಪಿಸಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ ನವೆಂಬರ್ 7ರಿಂದ 11ರವರೆಗೆ ದೇವದುರ್ಗ ಮತ್ತು ಅರಕೇರಾ ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಸ್ಥಳಗಳಲ್ಲಿ ರೈತರ ಸಭೆಗಳನ್ನು ಆಯೋಜಿಸಲಾಗಿದೆ. ಈ ಸಭೆಗಳಲ್ಲಿ ಬೆಳೆಗಳ ಸ್ಥಿತಿಗತಿ, ನೀರಿನ ಅಗತ್ಯತೆ, ಕೃಷಿ ವೆಚ್ಚ ಹಾಗೂ ಸಂಭವನೀಯ ನಷ್ಟದ ಕುರಿತು ರೈತರಿಂದ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ, ನೀರಾವರಿ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಾಲುವೆ ವ್ಯಾಪ್ತಿಯ ಬೆಳೆಗಳ ಸಮೀಕ್ಷೆ ನಡೆಸಿ, ನೀರಿನ ಕೊರತೆಯಿಂದ ಉಂಟಾಗಬಹುದಾದ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ವಾರದೊಳಗೆ ಅಧಿಕಾರಿಗಳಿಂದ ವರದಿ ದೊರೆಯುವ ನಿರೀಕ್ಷೆಯಿದ್ದು, ರೈತರಿಂದ ಸಂಗ್ರಹಿಸುವ ಮಾಹಿತಿ ಹಾಗೂ ಇಲಾಖೆಗಳ ವರದಿಯನ್ನು ಆಧರಿಸಿ ಜಿಲ್ಲಾಡಳಿತ ಮತ್ತು ನೀರಾವರಿ ಸಲಹಾ ಸಮಿತಿಯ ಗಮನಕ್ಕೆ ಸಮಸ್ಯೆಯನ್ನು ತರಲಾಗುವುದು. ಮುಂಬರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪಿಸಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಶಾಸಕಿ ಕರೆಮ್ಮ ನಾಯಕ, ಬರಗಾಲ ಘೋಷಣೆ ಮಾಡಿರುವ ಸರ್ಕಾರ ರೈತರಿಗೆ ಸಮರ್ಪಕ ಪರಿಹಾರ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡೀಸೆಲ್ ಖರೀದಿಗೂ ಹಣದ ಕೊರತೆಯಿದೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರದ ಆರ್ಥಿಕ ನಿರ್ವಹಣೆ ಕುರಿತು ಪ್ರಶ್ನೆ ಎತ್ತಿದರು. ಬರಗಾಲದ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ದೂರಿದರು.
ರೈತರ ಹಿತಾಸಕ್ತಿ ರಕ್ಷಿಸುವ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನವೆಂಬರ್ 12ರಿಂದ ನೀರು ಸ್ಥಗಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಿ ಜನವರಿವರೆಗೆ ನೀರು ಹರಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ನವೆಂಬರ್ 16ರಂದು ಸಿರವಾರ ಕ್ರಾಸ್ ಬಳಿ ಸಾವಿರಾರು ರೈತರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಲಾಗುವುದು. ರೈತರು ಪಕ್ಷಭೇದ ಮರೆತು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವದುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ, ಅರಕೇರಾ ತಾಲೂಕು ಅಧ್ಯಕ್ಷ ಸಿದ್ದಣ್ಣ ಬಿ. ಗಣೇಕಲ್, ಮುಖಂಡರಾದ ಶರಣಪ್ಪ ಬಳೆ, ಅಮರೇಶ ಪಾಟೀಲ್ ಪರ್ತಪೂರ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ಚನ್ನಪ್ಪ ಮಸೀದಪೂರ, ಶಿಖರೇಶ ಪಾಟೀಲ್, ನಾಗರಾಜ ಪಾಟೀಲ್, ಗೋವಿಂದರಾಜ್ ನಾಯಕ, ಶಾಲಂ ಉದ್ದಾರ, ಶಾಂತಕುಮಾರ ಗೋಪಾಳಪೂರ, ಶರಣಗೌಡ, ಚನ್ನಮ್ಮ ವಾಚಾನಾಯ್ಕ ತಾಂಡ ಹಾಗೂ ರಮೇಶ ರಾಮನಾಳ ಉಪಸ್ಥಿತರಿದ್ದರು.



