ಸಿಂಧನೂರು, ಅ.31: ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ನಿರ್ಲಕ್ಷಿಸದೆ, ಅವರಿಗೆ ಕುಟುಂಬದವರ ಪ್ರೀತಿ, ಸಹಕಾರ, ಧೈರ್ಯ ಹಾಗೂ ಸೂಕ್ತ ಆಪ್ತಸಮಾಲೋಚನೆಯೊಂದಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಮನಶಾಸ್ತ್ರಜ್ಞ ಅರುಣ್ ಕುಮಾರ್ ಕುಲಕರ್ಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ರಾಯಚೂರು, ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಂಧನೂರಿನ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯವೆಂದರೆ ಕೇವಲ ರೋಗರಹಿತ ಜೀವನವಲ್ಲ. ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸಂಪೂರ್ಣ ಸ್ವಸ್ಥವಾಗಿರುವುದೇ ನಿಜವಾದ ಆರೋಗ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾನಸಿಕ ಕಾಯಿಲೆಗಳ ಕುರಿತು ಇಂದಿಗೂ ಅನೇಕ ಮೂಢನಂಬಿಕೆಗಳು ಹಾಗೂ ತಪ್ಪು ಕಲ್ಪನೆಗಳು ಅಸ್ತಿತ್ವದಲ್ಲಿವೆ. ಇಂತಹ ನಂಬಿಕೆಗಳಿಂದಾಗಿ ಕೆಲವರು ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮಾನಸಿಕ ಕಾಯಿಲೆಗಳನ್ನೂ ಇತರ ಕಾಯಿಲೆಗಳಂತೆ ಪರಿಗಣಿಸಿ, ವೈಜ್ಞಾನಿಕ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಕುಟುಂಬದ ಸದಸ್ಯರು ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಚೇತರಿಕೆಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ, ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಕಾಯಿಲೆಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಮನೋಚೈತನ್ಯ ಕಾರ್ಯಕ್ರಮದ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉಚಿತ ಆಪ್ತಸಮಾಲೋಚನೆ ಹಾಗೂ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಮಾನಸಿಕ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವುದು ಮುಖ್ಯವಾಗಿದೆ. ಮಾನಸಿಕ ಕಾಯಿಲೆಗಳನ್ನು ಮುಚ್ಚಿಡುವುದು ಅಥವಾ ರೋಗಿಗಳನ್ನು ಸಮಾಜದಿಂದ ದೂರವಿಡುವುದು ಸರಿಯಲ್ಲ. ಬದಲಾಗಿ ಅವರಿಗೆ ಧೈರ್ಯ ತುಂಬಿ, ಪ್ರೀತಿ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು. ಈ ನಿಟ್ಟಿನಲ್ಲಿ ಕುಟುಂಬದವರು ಹಾಗೂ ಸಾರ್ವಜನಿಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲ ಹುಂಬಣ್ಣ ಎಲ್. ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಖಿನ್ನತೆ, ಚಿತ್ತಚಂಚಲತೆ ಸೇರಿದಂತೆ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ. ಅಪಸ್ಮಾರ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಬೇಕು ಎಂದರು.
ಮದ್ಯಪಾನ, ಧೂಮಪಾನ ಹಾಗೂ ಇತರ ದುಶ್ಚಟಗಳಿಂದ ದೂರವಿರುವಂತೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕು. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಕೀಳಾಗಿ ಕಾಣದೆ, ಅವರಿಗೆ ಸೂಕ್ತ ಮಾರ್ಗದರ್ಶನ, ಸಮಾಲೋಚನೆ ಹಾಗೂ ವೈದ್ಯಕೀಯ ನೆರವು ದೊರಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದ ಉಪನ್ಯಾಸಕರಾದ ಮುನಿಷ ಕಿರ್ಲೋಸ್ಕರ್, ಕೆ.ಸಿ. ಹವಾಲದ್ದಾರ್, ರಾಮೇಶ್ವರ ದಿನ್ನಿ, ಕೃಷ್ಣ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



