ದೇವದುರ್ಗ: ಬಾಲ್ಯವಿವಾಹವು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಅದನ್ನು ತಡೆಗಟ್ಟಲು ಕಾನೂನು ಅರಿವು ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ವಕೀಲ ಮಲ್ಲಿಕಾರ್ಜುನ ಪೆನಾಲ್ ತಿಳಿಸಿದರು.
ಬಾಲ್ಯವಿವಾಹ ನಿಷೇಧ ಕಾಯ್ದೆ–2006ರ ಕುರಿತು ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ 18 ವರ್ಷ ಹಾಗೂ ಗಂಡುಮಕ್ಕಳಿಗೆ 21 ವರ್ಷ ಪೂರ್ಣಗೊಳ್ಳುವ ಮೊದಲು ವಿವಾಹ ನಡೆಸುವುದು ಕಾನೂನುಬಾಹಿರವಾಗಿದೆ ಎಂದು ವಿವರಿಸಿದರು.
ಬಡತನ, ಅನಕ್ಷರತೆ, ಸಾಮಾಜಿಕ ಒತ್ತಡ, ಲಿಂಗ ತಾರತಮ್ಯ ಹಾಗೂ ಮೂಢನಂಬಿಕೆಗಳು ಬಾಲ್ಯವಿವಾಹಕ್ಕೆ ಪ್ರಮುಖ ಕಾರಣಗಳಾಗಿವೆ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗುವುದರಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವುದಲ್ಲದೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.
ಬಾಲ್ಯವಿವಾಹ ನಡೆಸುವವರು, ಅದಕ್ಕೆ ಪ್ರೋತ್ಸಾಹ ನೀಡುವವರು ಹಾಗೂ ಸಹಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಕಾಯ್ದೆಯಡಿ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹1 ಲಕ್ಷದವರೆಗೆ ದಂಡ ವಿಧಿಸುವ ನಿಬಂಧನೆಗಳಿವೆ. ಬಾಲ್ಯವಿವಾಹದ ಮಾಹಿತಿ ದೊರೆತರೆ ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕ ಅಥವಾ 1098 ಮಕ್ಕಳ ಸಹಾಯವಾಣಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ವಕೀಲರಾದ ಪವನ ಕುಮಾರ್ ಬೇನಕನ್ ಹಾಗೂ ಪ್ರಭುದೇವ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಲಯದ ಸಿಆರ್ಪಿ ದಾಕ್ಷಾಯಣಿ, ನಂಜುಂಡಯ್ಯ, ವೆಂಕಟಾಂಜನೇಯ, ಎಸ್ಡಿಎಂಸಿ ಅಧ್ಯಕ್ಷ ಮುದ್ದು ರಂಗಣ್ಣ, ಬೂದಾನಿ ಸುಗಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಯ, ಬಸವರಾಜ, ದೊರೆಸಾಬ್ ಗೌಡ, ಶಿವಪುತ್ರ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



