ರಾಯಚೂರು, ಅ. 26: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ಕಲ್ಪಿಸಿರುವ ವಿಶೇಷ ಸೌಲಭ್ಯಗಳನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸುವ ಪ್ರಯತ್ನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬೆಂಬಲ ವ್ಯಕ್ತಪಡಿಸಿರುವುದು ಕಲ್ಯಾಣ ಕರ್ನಾಟಕದ ಜನತೆಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ರಝಾಕ ಉಸ್ತಾದ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿಗೆ ಭೇಟಿ ನೀಡಿದ್ದ ವಿಜಯೇಂದ್ರ ಅವರು, ವಿಜಯಪುರ ಜಿಲ್ಲೆಯನ್ನು 371ಜೆ ವ್ಯಾಪ್ತಿಗೆ ಸೇರಿಸುವಂತೆ ನಡೆಯುತ್ತಿರುವ ಹೋರಾಟದ ವೇದಿಕೆಯಲ್ಲಿ ಭಾಗವಹಿಸಿ, ಬೇಡಿಕೆಗೆ ಬೆಂಬಲ ನೀಡುವುದಾಗಿ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಹೇಳಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದ ಅನುಚ್ಛೇದ 371ಜೆ ಜಾರಿಗೆ ತರಲಾಗಿದೆ. ಈ ಪ್ರದೇಶದ ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನು ಪರಿಗಣಿಸಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಂತಹ ಸೌಲಭ್ಯಗಳನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲು ಮುಂದಾಗುವುದು ಮೂಲ ಉದ್ದೇಶಕ್ಕೆ ಧಕ್ಕೆಯುಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 371ಜೆ ತಿದ್ದುಪಡಿ ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಇದೀಗ ಅದೇ ಪಕ್ಷದ ರಾಜ್ಯಾಧ್ಯಕ್ಷರು ವಿಜಯಪುರ ಜಿಲ್ಲೆಯನ್ನು ಈ ವ್ಯಾಪ್ತಿಗೆ ಸೇರಿಸುವುದಾಗಿ ಭರವಸೆ ನೀಡುತ್ತಿರುವುದು ವಿರೋಧಾಭಾಸದ ನಿಲುವಾಗಿದೆ ಎಂದು ಟೀಕಿಸಿದ್ದಾರೆ.

ರಾಜ್ಯದ ಇತರ ಪ್ರದೇಶಗಳಿಗೆ ವಿಶೇಷ ಸೌಲಭ್ಯಗಳ ಅಗತ್ಯವಿದ್ದರೆ ಸಂವಿಧಾನದ ಅನುಚ್ಛೇದ 371ರ ಅಡಿಯಲ್ಲಿ ಪ್ರತ್ಯೇಕ ತಿದ್ದುಪಡಿ ಮೂಲಕ 371ಕೆ ಅಥವಾ 371ಎಲ್‌ನಂತಹ ಹೊಸ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಿ. ಆದರೆ ಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ ದೊರೆತಿರುವ ವಿಶೇಷ ಸ್ಥಾನಮಾನದ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಬಾರದು ಎಂದು ಒತ್ತಾಯಿಸಿದ್ದಾರೆ.

371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದಲ್ಲಿ ವಿಶೇಷ ಅವಕಾಶಗಳು, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಸೇರಿದಂತೆ ಹಲವು ಸೌಲಭ್ಯಗಳು ದೊರೆಯುತ್ತಿವೆ. ರಾಜ್ಯ ಸರ್ಕಾರದಿಂದ ಮಂಡಳಿಗೆ ₹5,000 ಕೋಟಿ ಅನುದಾನ ಒದಗಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಇತರ ಪ್ರದೇಶಗಳಲ್ಲಿಯೂ ಇದೇ ಸೌಲಭ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಬಿ. ಶ್ರೀರಾಮುಲು ಅವರು ಮೊಳಕಾಲ್ಮೂರು ತಾಲ್ಲೂಕನ್ನು 371ಜೆ ವ್ಯಾಪ್ತಿಗೆ ಸೇರಿಸುವುದಾಗಿ ಹೇಳಿಕೆ ನೀಡಿದ್ದನ್ನು ಜನತೆ ಮರೆತಿಲ್ಲ. ಇದೀಗ ವಿಜಯೇಂದ್ರ ಅವರು ವಿಜಯಪುರ ಜಿಲ್ಲೆಯ ಬೇಡಿಕೆಗೆ ಬೆಂಬಲ ನೀಡುವ ಮೂಲಕ ಮತ್ತೊಮ್ಮೆ ಇದೇ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ 371ಜೆ ಸ್ಥಾನಮಾನ ದೊರೆತಿರುವುದು ದೀರ್ಘಕಾಲದ ಹೋರಾಟದ ಫಲವಾಗಿದೆ. ಅದರ ಐತಿಹಾಸಿಕ ಹಿನ್ನೆಲೆ ಹಾಗೂ ಉದ್ದೇಶವನ್ನು ಅರಿತು ರಾಜಕೀಯ ನಾಯಕರು ಹೇಳಿಕೆ ನೀಡಬೇಕು. ಈ ವಿಷಯದಲ್ಲಿ ವಿಜಯೇಂದ್ರ ಅವರು ತಮ್ಮ ನಿಲುವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋಲು ಅನುಭವಿಸಿದೆ ಎಂದು ಉಲ್ಲೇಖಿಸಿರುವ ಅವರು, ಪ್ರದೇಶದ ಹಿತಾಸಕ್ತಿಗೆ ವಿರುದ್ಧವಾದ ನಿಲುವು ಮುಂದುವರಿದರೆ ಜನರಿಂದ ಮತ್ತಷ್ಟು ವಿರೋಧ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

371ಜೆ ವಿಶೇಷ ಸ್ಥಾನಮಾನದ ವಿಚಾರದಲ್ಲಿ ಕಲ್ಯಾಣ ಕರ್ನಾಟಕದ ಜನರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಇಂತಹ ಹೇಳಿಕೆಗಳು ಮುಂದುವರಿದರೆ ವಿಜಯೇಂದ್ರ ವಿರುದ್ಧ ವಿವಿಧೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ಡಾ. ರಝಾಕ ಉಸ್ತಾದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.