ರಾಯಚೂರು, ಸೆ.25: ನಗರದ ವಾಸವಿ ಗಜಾನನ ಉತ್ಸವ ಸಮಿತಿ ವತಿಯಿಂದ 39ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು. ಸಂಗೀತ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಗಣೇಶನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕೆ. ಶಿವನಗೌಡ ನಾಯಕ್, ಸಮಾಜದ ಪ್ರಗತಿಗೆ ಒಗ್ಗಟ್ಟು ಮತ್ತು ಪರಸ್ಪರ ಸಹಕಾರ ಅತ್ಯಂತ ಮುಖ್ಯವಾಗಿದೆ. ಹಬ್ಬ-ಹರಿದಿನಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ಯುವಜನರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಸಂಭ್ರಮವನ್ನು ಹೆಚ್ಚಿಸಿದರು.
ಉತ್ಸವದ ಅಂಗವಾಗಿ ನಡೆದ ಹರಾಜಿನಲ್ಲಿ ಬಂಗಾರದ ನಾಣ್ಯವನ್ನು ₹1.25 ಲಕ್ಷಕ್ಕೆ ಲಕ್ಷ್ಮೀನಾರಾಯಣ ಪಡೆದುಕೊಂಡರು. ಗಣೇಶನ ಲಡ್ಡುವನ್ನು ₹1.10 ಲಕ್ಷಕ್ಕೆ ಟೈಗರ್ ಸಣ್ಣಬಾಬು, ಬೆಳ್ಳಿ ಜನಿವಾರವನ್ನು ₹90 ಸಾವಿರಕ್ಕೆ ಕುಸುಮೂರ್ತಿ ಪ್ರದೀಪ್ ಹಾಗೂ ಬೆಳ್ಳಿ ನಾಣ್ಯವನ್ನು ₹55 ಸಾವಿರಕ್ಕೆ ಅಭಿಷೇಕ್ ಗಣಧಾಳ್ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರು, ಗಣ್ಯರು ಹಾಗೂ ಉತ್ಸವದ ಯಶಸ್ಸಿಗೆ ಸಹಕರಿಸಿದವರನ್ನು ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಗೀತಾ ಮಂದಿರದ ಅಧ್ಯಕ್ಷ ಲಕ್ಷ್ಮೀಪತಿ ಗಣಧಾಳ್, ಆರ್ಯವೈಶ್ಯ ಸಮಾಜದ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ್, ಕಾರ್ಯದರ್ಶಿ ಸಿ. ಪದ್ಮರಾಜ್, ಜಾತ್ರಂ ಶ್ರೀನಿವಾಸ್ ಸೇರಿದಂತೆ ಸಮಾಜದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವಾಸವಿ ಗಜಾನನ ಉತ್ಸವ ಸಮಿತಿಯ ಅಧ್ಯಕ್ಷ ಗಾರಲ್ ವೆಂಕಟೇಶ್, ಗೌರವಾಧ್ಯಕ್ಷ ಎಂ.ಆರ್. ಅಶ್ವಥ್, ಕಾರ್ಯದರ್ಶಿ ಅನ್ನ ಶ್ರೀಕಾಂತ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.



