ರಾಯಚೂರು, ಸೆ.28: ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)-2026ಕ್ಕೆ ಸಜ್ಜಾಗುತ್ತಿರುವ ಅಭ್ಯರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಅಶ್ವಮೇಧ ಫೌಂಡೇಶನ್ ವತಿಯಿಂದ ಅ.4ರಂದು ಕೆ-ಸೆಟ್ ಪತ್ರಿಕೆ-1ರ ಸಾಮಾನ್ಯ ಅಧ್ಯಯನ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರಮೇಶ್ ಉಪ್ರಾಳ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ವೃತ್ತದ ಪಕ್ಕದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದರು.

ಕೆ-ಸೆಟ್ ಪತ್ರಿಕೆ-1ರ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಹಾಗೂ ಪರೀಕ್ಷೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಅಭ್ಯರ್ಥಿಗಳಿಗೆ ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಲಾಗುವುದು. ಅನುಭವಿ ಸಂಪನ್ಮೂಲ ವ್ಯಕ್ತಿ ಹನುಮಂತ ನಾಯಕ (ಎಂ.ಎ., ನೆಟ್, ಎಂಎಲ್‌ಐಎಸ್‌ಸಿ, ಜೆಆರ್‌ಎಫ್/ನೆಟ್, ಕೆ-ಸೆಟ್, ಪಿಎಚ್.ಡಿ.) ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಯ ಸ್ವರೂಪ, ಪತ್ರಿಕೆ-1ರಲ್ಲಿ ಗಮನಹರಿಸಬೇಕಾದ ಪ್ರಮುಖ ವಿಷಯಗಳು, ಪ್ರಶ್ನೆಗಳನ್ನು ಎದುರಿಸುವ ವಿಧಾನ ಹಾಗೂ ಉತ್ತಮ ಅಂಕ ಗಳಿಸಲು ಅನುಸರಿಸಬೇಕಾದ ಸಿದ್ಧತಾ ಕ್ರಮಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದರು.

ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಕೆ-ಸೆಟ್ ಪರೀಕ್ಷೆ ಪ್ರಮುಖವಾಗಿದೆ. ಹೀಗಾಗಿ ರಾಯಚೂರು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯಬೇಕು ಮತ್ತು ಈ ಭಾಗದಿಂದ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕು ಎಂಬ ಆಶಯದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.

ಆಸಕ್ತ ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಪರೀಕ್ಷಾ ತಯಾರಿಗೆ ಅಗತ್ಯವಾದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಳ್ಳಬೇಕು. ಭಾಗವಹಿಸುವ ಪ್ರತಿ ಅಭ್ಯರ್ಥಿಗೆ ₹100 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ. ಮೌಲಪ್ಪ, ಅನಂತ್ ರೆಡ್ಡಿ, ಜಾನ್ಸನ್, ಅಂಜಿ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.