ರಾಯಚೂರು: ನಗರದ ಜಿಲ್ಲಾಧಿಕಾರಿಗಳ ಬಂಗಲೆ ಸಮೀಪದ ಅಸ್ಕಿಹಾಳ ಗೇಟ್ ಹಿರೇಮಠದ ಶ್ರೀ ಅಮರಲಿಂಗೇಶ್ವರ ಮಠದಲ್ಲಿ ಶ್ರೀಮಠದ ಧರ್ಮಾಧಿಕಾರಿ ವೇ.ಮೂ. ಜಿ.ಎಸ್. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ 42ನೇ ವರ್ಷದ ಶರನ್ನವರಾತ್ರಿ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಶರನ್ನವರಾತ್ರಿ ಅಂಗವಾಗಿ ಕಳೆದ ಏಳು ದಿನಗಳಿಂದ ಶ್ರೀಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶ್ರೀದೇವಿಯ ಭಾವಚಿತ್ರವನ್ನು ಮಠದ ಪೀಠದ ಮೇಲೆ ಪ್ರತಿಷ್ಠಾಪಿಸಿ ಪ್ರತಿದಿನ ಪುಷ್ಪಾಲಂಕಾರ ಹಾಗೂ ವಿವಿಧ ಬಣ್ಣದ ಸೀರೆಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶ್ರೀದೇವಿ ಪುರಾಣ ಪಠಣ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ದರ್ಶನಕ್ಕೆ ಆಗಮಿಸುವ ಭಕ್ತರಿಗೆ ತೀರ್ಥಪ್ರಸಾದ ವಿತರಿಸುವ ಸಂಪ್ರದಾಯ ಮುಂದುವರಿದಿದೆ.

ದುರ್ಗಾಷ್ಟಮಿಯ ಅಂಗವಾಗಿ ಶ್ರೀಮಠದಲ್ಲಿ ವೇ.ಮೂ. ನಿರಂಜನ ಸ್ವಾಮಿ ಹಿರೇಮಠ ಅವರು ಬಾಲ ಮುತ್ತೈದೆಯರಿಗೆ ಪಾದಪೂಜೆ ನೆರವೇರಿಸಿ, ಆರತಿ ಬೆಳಗಿ ಪ್ರಸಾದ ಸಮರ್ಪಿಸಿದರು. ನಾಡಿನ ಜನತೆಗೆ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹಿಂಗಾರು ಹಂಗಾಮಿನಲ್ಲಾದರೂ ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧವಾಗಿ ಬೆಳೆಯಬೇಕು. ರೈತರ ಬದುಕಿನಲ್ಲಿ ನೆಮ್ಮದಿ ಮೂಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಲಾಯಿತು. ಬಳಿಕ ಹಿರೇಮಠ ಕುಟುಂಬದ ಸದಸ್ಯರು ಬಾಲ ಮುತ್ತೈದೆಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಪೂಜಾ ಕಾರ್ಯಕ್ರಮದ ವೇಳೆ ಮಹಿಳೆಯೊಬ್ಬರು ಭಾವಾವೇಶಕ್ಕೆ ಒಳಗಾಗಿ ನಗುತ್ತಾ ಕೂಗಾಡಿದ ಘಟನೆ ನಡೆಯಿತು. ಇದನ್ನು ಕಂಡ ಕೆಲ ಭಕ್ತರು ಶಾಂಭವಿ ಮಾತೆಯ ಆವೇಶವೆಂದು ಭಾವಿಸಿ ಭಕ್ತಿಯಿಂದ ಕೈಮುಗಿದರು. ಈ ಸಂದರ್ಭದಲ್ಲಿ ಶ್ರೀಮಠದ ಧರ್ಮಾಧಿಕಾರಿಗಳು ಮಹಿಳೆಯ ತಲೆಗೆ ತೀರ್ಥ ಪ್ರೋಕ್ಷಿಸಿ, ಹಣೆಗೆ ಬಂಡಾರ ಮತ್ತು ಕುಂಕುಮ ಹಚ್ಚಿ ಪ್ರಾರ್ಥಿಸಿದರು. ಸ್ವಲ್ಪ ಸಮಯದ ಬಳಿಕ ಮಹಿಳೆ ಸಹಜ ಸ್ಥಿತಿಗೆ ಮರಳಿದರು.

ನಂತರ ಶ್ರೀಮಠಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಸಂಪ್ರದಾಯದಂತೆ ಉಡಿ ತುಂಬಿ ಗೌರವ ಸಲ್ಲಿಸಲಾಯಿತು. ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಬಳಿಕ ನೂರಾರು ಭಕ್ತರು ಸಾಮೂಹಿಕ ಮಹಾಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಅಸ್ಕಿಹಾಳ ಗೇಟ್ ಹಿರೇಮಠ ಕುಟುಂಬದ ಸದಸ್ಯರು, ಬಡಾವಣೆಯ ನಿವಾಸಿಗಳು ಹಾಗೂ ವಂಕಸಂಬ್ರ, ಯಾದಗಿರಿ, ದೇವದುರ್ಗ, ಗಬ್ಬೂರು ಸೇರಿದಂತೆ ರಾಯಚೂರು ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.