ರಾಯಚೂರು: ನಗರದ ವೀರಶೈವ ಗೌಳಿ ಸಮಾಜದ ವತಿಯಿಂದ ಕಳೆದ 44 ವರ್ಷಗಳಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಮಾತಾ ಶ್ರೀ ಅಂಬಾಭವಾನಿ ದೇವಿಯ ನವರಾತ್ರಿ ಮಹೋತ್ಸವಕ್ಕೆ ಭಾನುವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಚಾಲನೆ ನೀಡಲಾಯಿತು. ನಗರದ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಯವರು ದೇವಿಯ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಗೌಳಿ ಸಮಾಜವು ಹಲವು ದಶಕಗಳಿಂದ ಅಂಬಾಭವಾನಿ ದೇವಿಯ ಆರಾಧನೆಯೊಂದಿಗೆ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಬಂಗಿಕುಂಟಾದಲ್ಲಿ ಸಮಾಜದ ವತಿಯಿಂದ ಪ್ರತಿವರ್ಷ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜೆ, ದೇವಿಯ ಅಲಂಕಾರ ಹಾಗೂ ಅನ್ನದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ನವರಾತ್ರಿ ಉತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಸಮಾಜದಲ್ಲಿ ಭಕ್ತಿ, ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಮನೋಭಾವ ಬೆಳೆಸುವ ಮಹತ್ವದ ಸಂದರ್ಭವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಜನರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಿಲ್ಲೆ ಬೃಹನ್ಮಠದಿಂದ ಆರಂಭವಾದ ಶ್ರೀ ಅಂಬಾಭವಾನಿ ದೇವಿಯ ಮೂರ್ತಿಯ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳು ಹಾಗೂ ವಿವಿಧ ವೃತ್ತಗಳ ಮೂಲಕ ಸಾಗಿಬಂದು ಬೇಸ್ತವಾರಪೇಟೆಯ ಶ್ರೀ ಅಂಬಾಭವಾನಿ ವೃತ್ತ ತಲುಪಿತು. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಘಟಸ್ಥಾಪನೆ ನೆರವೇರಿಸುವ ಮೂಲಕ ನವರಾತ್ರಿ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಗೌಳಿ ಸಮಾಜದ ವತಿಯಿಂದ ಸತತ 44ನೇ ವರ್ಷ ನವರಾತ್ರಿ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಒಂಬತ್ತು ದಿನಗಳ ಕಾಲ ಪ್ರತಿದಿನ ಸಂಜೆ ದೇವಿಗೆ ಕುಂಕುಮಾರ್ಚನೆ, ಅಭಿಷೇಕ, ಮಹಾಮಂಗಳಾರತಿ ಹಾಗೂ ವಿವಿಧ ರೂಪಗಳಲ್ಲಿ ವಿಶೇಷ ಅಲಂಕಾರ ಮಾಡಲಾಗುವುದು. ಉತ್ಸವದ ಅವಧಿಯಲ್ಲಿ ಅನ್ನದಾಸೋಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹತ್ತು ದಿನಗಳ ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಸಮಾಜದ ಪದಾಧಿಕಾರಿಗಳು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ವಿಶ್ವನಾಥ ಬಹಗನರೆ, ವೀರೇಶ ಲಂಗೋಟೆ, ಕಾರ್ಯದರ್ಶಿ ರಾಮಣ್ಣ ಪಂಗುಡವಾಲೆ, ಶೋಭಾ ಪೀರನಾಯಕ್, ರಮೇಶ ದಿವಟೆ, ಗಣೇಶ ಬಾಬು ಲಂಗೋಟೆ, ಚಂದ್ರಕಾಂತ ಜಿಪರೆ, ಸೂರಿ ಲಂಗೋಟೆ, ಸಾಯತ್ರಾಬಾಯಿ ಬಹಿರವಾಡೆ, ಅನಿತಾ ಅವಿಶೇಕರ್, ನೀಲಾಬಾಯಿ ಲಂಗೋಟೆ, ಏರುಬಾಯಿ ಬಡವಾಣೆ, ಲಲಿತಾ ಗಲಾಂಡೆ ಸೇರಿದಂತೆ ವೀರಶೈವ ಗೌಳಿ ಸಮಾಜದ ಮುಖಂಡರು, ಪದಾಧಿಕಾರಿಗಳು, ಮಹಿಳೆಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.



