ರಾಯಚೂರು: ನಗರದ ಶ್ರೀ ರಾಘವೇಂದ್ರ ಸ್ವಾಮಿ ಶ್ರೀಮಠದ ಆವರಣದಲ್ಲಿ ಅ.3 ಮತ್ತು 4ರಂದು ನಡೆಯಲಿರುವ ‘ಗೋವಿಂದ ಗಾನ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಸುಮಾರು 500 ಮಹಿಳೆಯರಿಗೆ ಸಾಮೂಹಿಕ ಗಾಯನದ ತರಬೇತಿ ಹಾಗೂ ಅಭ್ಯಾಸ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದ ದಾಸವಾಣಿ ಗಾಯಕ ರಾಯಚೂರು ಶೇಷಗಿರಿ ದಾಸ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಪ್ರತಿವರ್ಷದ ಸಂಪ್ರದಾಯದಂತೆ ಆಯೋಜಿಸಲಾಗುವ ‘ಗೋವಿಂದ ಗಾನ’ ಕಾರ್ಯಕ್ರಮದಲ್ಲಿ ಮಹಿಳೆಯರು ಶ್ರುತಿ, ಲಯ ಹಾಗೂ ತಾಳಬದ್ಧವಾಗಿ ಸಾಮೂಹಿಕ ಗಾಯನ ನಡೆಸುವ ಹಿನ್ನೆಲೆಯಲ್ಲಿ ಈ ಪೂರ್ವಭಾವಿ ಅಭ್ಯಾಸವನ್ನು ಆಯೋಜಿಸಲಾಗಿತ್ತು.

ಜವಾಹರ ನಗರದ ಶ್ರೀಮಠದ ಮಠಾಧಿಕಾರಿ ಆನಂದ ಆಚಾರ ಅವರು ಗೋವಿಂದ ದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ 500 ಮಹಿಳೆಯರ ಸಾಮೂಹಿಕ ಗಾಯನದ ತರಬೇತಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಯಚೂರಿನ ಅಸ್ಕಿಹಾಳ ಗ್ರಾಮದ ಗೋವಿಂದ ದಾಸರು ಸರ್ವ ಸಮುದಾಯದ ಜನರನ್ನು ಒಗ್ಗೂಡಿಸಿ ಶ್ರೀಹರಿಯ ನಾಮಸ್ಮರಣೆಯ ಮಹತ್ವವನ್ನು ಸಾರಿದವರು. ಅವರ ಪರಂಪರೆಯವರಾದ ರಾಯಚೂರು ಶೇಷಗಿರಿ ದಾಸ ಅವರು ದಾಸ ಸಾಹಿತ್ಯ ಮತ್ತು ದಾಸವಾಣಿಯನ್ನು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಸವಾಣಿ ಗಾಯನದ ಮೂಲಕ ಗುರುತಿಸಿಕೊಂಡಿರುವ ಶೇಷಗಿರಿ ದಾಸ ಅವರು ನೂರಾರು ಮಹಿಳೆಯರೊಂದಿಗೆ ಕುಳಿತು ಗಾಯನದ ಅಭ್ಯಾಸ ಮಾಡಿಸುತ್ತಿರುವುದು ಅವರ ಸರಳತೆ ಹಾಗೂ ದಾಸ ಸಾಹಿತ್ಯದ ಮೇಲಿನ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಬಳಿಕ ರಾಯಚೂರು ಶೇಷಗಿರಿ ದಾಸ ಅವರು ಅ.3 ಮತ್ತು 4ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಾಡಬೇಕಾದ ಗೀತೆಗಳನ್ನು ಮಹಿಳೆಯರಿಗೆ ಅಭ್ಯಾಸ ಮಾಡಿಸಿದರು. ಹಾಡುಗಳನ್ನು ಯಾವ ರೀತಿಯಲ್ಲಿ ಪ್ರಸ್ತುತಪಡಿಸಬೇಕು, ಶ್ರುತಿ, ಲಯ ಮತ್ತು ತಾಳದ ಹೊಂದಾಣಿಕೆ ಹೇಗಿರಬೇಕು ಹಾಗೂ 500 ಮಹಿಳೆಯರ ಧ್ವನಿ ಸಾಮೂಹಿಕ ಗಾಯನದಲ್ಲಿ ಏಕರೂಪವಾಗಿ ಮೂಡಿಬರಲು ಅನುಸರಿಸಬೇಕಾದ ವಿಧಾನಗಳ ಕುರಿತು ವಿವರವಾಗಿ ತರಬೇತಿ ನೀಡಿದರು. ತಾವೂ ಜೊತೆಯಲ್ಲಿ ಹಾಡುವ ಮೂಲಕ ಪ್ರಾಯೋಗಿಕವಾಗಿ ಮಾರ್ಗದರ್ಶನ ಮಾಡಿದರು.

ಸುಮಾರು 500 ಮಹಿಳೆಯರು ಏಕಕಾಲದಲ್ಲಿ ಗಾಯನಾಭ್ಯಾಸದಲ್ಲಿ ಪಾಲ್ಗೊಂಡಿದ್ದರಿಂದ ಶ್ರೀಮಠದ ಆವರಣ ಭಕ್ತಿ ಮತ್ತು ದಾಸವಾಣಿಯ ನಾದದಿಂದ ಕಂಗೊಳಿಸಿತು. ಈ ಪೂರ್ವಭಾವಿ ತರಬೇತಿಯೊಂದಿಗೆ ಅ.3 ಮತ್ತು 4ರಂದು ನಡೆಯಲಿರುವ ‘ಗೋವಿಂದ ಗಾನ’ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮುರಳೀಧರ ಕುಲಕರ್ಣಿ, ಸುರೇಶ್ ಕಲ್ಲೂರು, ಜಯಕುಮಾರ ದೇಸಾಯಿ ಕಾಡ್ಲೂರು, ವೆಂಕಟೇಶ ಕೋಲಾರ, ವೆಂಕೋಬ ಆಚಾರ, ರವೀಂದ್ರ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ, ವೇಣುಗೋಪಾಲ್, ವರಪ್ ಕುಲಕರ್ಣಿ ಸೇರಿದಂತೆ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.