ರಾಯಚೂರು, ಅ.19: ನಗರದ ಬ್ರೇಸ್ತವಾರಪೇಟೆ ಉಪ್ಪಾರವಾಡಿಯಲ್ಲಿರುವ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ 55ನೇ ವರ್ಷದ ನವರಾತ್ರಿ ಉತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಆಚರಿಸಲಾಯಿತು. ಉತ್ಸವದ ಅಂಗವಾಗಿ ವಿಶೇಷ ಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ, ಅಶ್ವವಾಹನ ಪಲ್ಲಕ್ಕಿ ಸೇವೆ ಹಾಗೂ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬೆಳಿಗ್ಗೆ 9.30ಕ್ಕೆ ಶ್ರೀ ವೆಂಕಟೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ 6 ಗಂಟೆಗೆ ಭಕ್ತರು ಹಾಗೂ ಭಜನಾ ಮಂಡಳಿಯ ಸದಸ್ಯರ ಸಹಭಾಗಿತ್ವದಲ್ಲಿ ಅಶ್ವವಾಹನ ಪಲ್ಲಕ್ಕಿ ಸೇವೆ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ವೆಂಕಟೇಶ್ವರಸ್ವಾಮಿಯ ರಥೋತ್ಸವವನ್ನು ಗಟ್ಟು ವೆಂಕಟೇಶ, ಗಟ್ಟು ಶ್ರೀನಿವಾಸ, ಗಟ್ಟು ಗೋವಿಂದರಾಜು ಹಾಗೂ ಅವರ ಕುಟುಂಬದವರು ಸೇವಾಕರ್ತರಾಗಿ ನೆರವೇರಿಸಿದರು. ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾದ ರಥಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ಕಾಂತಾಚಾರಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಕ್ತರ ಸಮ್ಮುಖದಲ್ಲಿ ದೇವಸ್ಥಾನದಿಂದ ಗೀತಾಮಂದಿರದವರೆಗೆ ರಥೋತ್ಸವ ಮೆರವಣಿಗೆ ಸಾಗಿದ್ದು, ಅಲ್ಲಿಂದ ಮರಳಿ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನಕ್ಕೆ ತಲುಪಿತು.

ರಥೋತ್ಸವದ ಸಂದರ್ಭದಲ್ಲಿ ಭಕ್ತರು ಶ್ರೀ ವೆಂಕಟೇಶ್ವರಸ್ವಾಮಿಯ ನಾಮಸ್ಮರಣೆ ಮಾಡುತ್ತಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಉತ್ಸವದ ಅಂಗವಾಗಿ ಸ್ವಾಮಿಯ ಮುತ್ತಿನಹಾರದ ಮಾರಾಟ ಹಾಗೂ ವಿವಿಧ ಭಕ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಲ್ಲಪ್ಪ (ಆದೋನಿ), ಎಂ. ವೆಂಕಟೇಶ, ಎಂ. ಈರಣ್ಣ, ಪಾಗುಂಟಪ್ಪ, ದೇವೇಂದ್ರಪ್ಪ, ಯು. ವೆಂಕೋಬ, ಚಂದ್ರಶೇಖರ ಮಾಡಿಗಿರಿ, ಬಿ. ಪ್ರವೀಣ್‌ಕುಮಾರ್, ಕೆ. ಅಂಜಿನಯ್ಯ, ಬಿ.ಜಿ. ನಾಗರಾಜ್, ಬಿ. ಶ್ರೀನಿವಾಸ, ಗಟ್ಟು ಶ್ರೀನಿವಾಸ, ಯು. ಶ್ರೀನಿವಾಸ, ವೆಂಕಟೇಶ ಗಧಾರ್, ಗಟ್ಟು ರಾಘವೇಂದ್ರ, ಶಶಿಧರ್ (ಗಡಗಿ), ಚಿದಾನಂದ, ಆರ್. ಶ್ರೀನಿವಾಸ, ಗಟ್ಟು ಶಂಕರ್, ಟಿ.ಎನ್. ರಂಗನಾಥ, ನವೀನ್ ಸೇರಿದಂತೆ ಸಮಾಜದ ಕುಲಬಾಂಧವರು, ಭಜನಾ ಮಂಡಳಿಯ ಸದಸ್ಯರು ಹಾಗೂ ನೂರಾರು ಭಕ್ತಾದಿಗಳು ಭಾಗವಹಿಸಿ ಶ್ರೀ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದರು.