ರಾಯಚೂರು, ಅ.13: ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಹಾಗೂ ನಶಾಮುಕ್ತ ಸಮಾಜ ನಿರ್ಮಾಣದ ಸಂದೇಶದೊಂದಿಗೆ ಪ್ರತಿನಿತ್ಯ ಸೈಕಲ್ ಮೂಲಕ ಕರ್ತವ್ಯಕ್ಕೆ ತೆರಳುತ್ತಿರುವ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಎಂ. ಬಸವರಾಜ್ ಪಾಟೀಲ್ ಅವರ ಸೈಕಲ್ ಪ್ರಯಾಣದ ಅಭಿಯಾನ ಮಂಗಳವಾರ 60 ದಿನಗಳನ್ನು ಪೂರ್ಣಗೊಳಿಸಿದೆ.
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಮನೆಯಿಂದ ರಿಮ್ಸ್ ವೈದ್ಯಕೀಯ ಕಾಲೇಜು ಹಾಗೂ ಕಚೇರಿಗೆ ಸೈಕಲ್ ಮೂಲಕ ತೆರಳುವ ಅಭಿಯಾನ ಆರಂಭಿಸಿದ್ದ ಅವರು, ಕಳೆದ 60 ದಿನಗಳಿಂದ ಸೈಕಲ್ ಬಳಕೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಡಾ. ಬಸವರಾಜ್ ಪಾಟೀಲ್ ಅವರು ರಾಯಚೂರು ಸೈಕಲ್ ಅಸೋಸಿಯೇಷನ್ನ ಪ್ರಮುಖರಾಗಿದ್ದಾರೆ. ಮಧುಮೇಹ ಚಿಕಿತ್ಸಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರು, ಲಯನ್ಸ್ ಕ್ಲಬ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವೈದ್ಯಕೀಯ ಸೇವೆಯ ಜೊತೆಗೆ ಪರಿಸರ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಹಾಗೂ ನಶಾಮುಕ್ತ ಭಾರತದ ಪರಿಕಲ್ಪನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅವರು ಸೈಕಲ್ ಪ್ರಯಾಣಕ್ಕೆ ಆದ್ಯತೆ ನೀಡಿದ್ದಾರೆ. ನಶಾಮುಕ್ತ ಕರ್ನಾಟಕ ಹಾಗೂ ನಶಾಮುಕ್ತ ರಾಯಚೂರು ನಿರ್ಮಾಣದ ಸಂದೇಶವನ್ನು ತಮ್ಮ ಅಭಿಯಾನದ ಮೂಲಕ ಸಾರುತ್ತಿದ್ದಾರೆ.
ಅನುಭವಿ ಸೈಕಲ್ ಸವಾರರಾಗಿರುವ ಡಾ. ಬಸವರಾಜ್ ಪಾಟೀಲ್ ಅವರು ಈ ಹಿಂದೆಯೂ ನೂರಾರು ಹಾಗೂ ಸಾವಿರಾರು ಕಿಲೋಮೀಟರ್ಗಳ ಸೈಕಲ್ ಪ್ರಯಾಣ ಕೈಗೊಂಡಿದ್ದಾರೆ. ಬಿಡುವಿಲ್ಲದ ವೈದ್ಯಕೀಯ ವೃತ್ತಿಯ ನಡುವೆಯೂ ಸೈಕಲ್ ಸವಾರಿಯನ್ನು ದಿನನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಂಡಿರುವುದು ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.
ಅವರ ಪರಿಸರ ಹಾಗೂ ಆರೋಗ್ಯ ಜಾಗೃತಿ ಕಾರ್ಯವನ್ನು ಪರಿಗಣಿಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಯಭಾರಿಯಾಗಿ ಜವಾಬ್ದಾರಿ ನೀಡುವ ಕುರಿತು ಪ್ರಸ್ತಾಪವಾಗಿದೆ ಎಂದು ತಿಳಿದುಬಂದಿದೆ. ಇದೇ ರೀತಿ, ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ನಿರಂತರ ಸೈಕಲ್ ಪ್ರಯಾಣದ ಈ ಅಭಿಯಾನ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗುವ ಆಶಯವನ್ನೂ ವ್ಯಕ್ತಪಡಿಸಲಾಗಿದೆ.
ಗಾಂಧಿ ಜಯಂತಿಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಸೇರಿದಂತೆ ವಿವಿಧ ಅಧಿಕಾರಿಗಳು ಡಾ. ಬಸವರಾಜ್ ಪಾಟೀಲ್ ಅವರ ಸೈಕಲ್ ಪ್ರಯಾಣದ ಕಾರ್ಯವನ್ನು ಶ್ಲಾಘಿಸಿ ಪ್ರೋತ್ಸಾಹ ನೀಡಿದ್ದರು.
ಸೈಕಲ್ ಪ್ರಯಾಣದ 60ನೇ ದಿನದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕ ಡಾ. ದಂಡಪ್ಪ ಬಿರಾದಾರ ಹಸಿರು ನಿಶಾನೆ ತೋರಿಸುವ ಮೂಲಕ ಸೈಕಲ್ ಸವಾರಿಗೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಬಸವರಾಜ್ ಪಾಟೀಲ್ ಅವರ ಸ್ನೇಹಿತರು, ಡಾ. ಬಿರಾದಾರ ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ಆರೋಗ್ಯಕರ ಸಮಾಜ ಮತ್ತು ಪರಿಸರ ಸಂರಕ್ಷಣೆಗಾಗಿ ಅವರು ಕೈಗೊಂಡಿರುವ ಜಾಗೃತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.



