ರಾಯಚೂರು: ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನಂಜಪ್ಪ ಅವರು ತಮ್ಮ 65ನೇ ಜನ್ಮದಿನದ ಅಂಗವಾಗಿ ಗುರುವಾರ ನಗರದ ಹಿಂದೂನಮಂನಲ್ಲಿರುವ ಓಂ ಸಾಯಿ ಧ್ಯಾನ ಮಂದಿರಕ್ಕೆ ಭೇಟಿ ನೀಡಿ, ಶಿರಡಿ ಸಾಯಿಬಾಬಾರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮೊದಲ ಬಾರಿಗೆ ಮಂದಿರಕ್ಕೆ ಆಗಮಿಸಿದ ನಂಜಪ್ಪ ಅವರನ್ನು ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿಕಿರಣ್ ಗುರುಜಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಶಾಲು ಹೊದಿಸಿ, ಸನ್ಮಾನಿಸುವ ಮೂಲಕ ಜನ್ಮದಿನದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಯಿಕಿರಣ್ ಗುರುಜಿ, ಸಮಾಜದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ನಂಜಪ್ಪ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ನೆಮ್ಮದಿಯ ಜೀವನ ದೊರೆಯಲಿ. ಅವರ ಸಾಮಾಜಿಕ ಹಾಗೂ ಸಾರ್ವಜನಿಕ ಸೇವಾ ಕಾರ್ಯಗಳು ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.

ಜನ್ಮದಿನದ ಹಿನ್ನೆಲೆಯಲ್ಲಿ ಮಂದಿರದಲ್ಲಿ ಸಾಯಿಬಾಬಾರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂಜಪ್ಪ ಅವರ ಮುಂದಿನ ಜೀವನ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಪ್ರಾರ್ಥಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ನಗರಸಭಾ ಸದಸ್ಯ ಜಿ. ಶಿವಮೂರ್ತಿ, ಕಾಂಗ್ರೆಸ್ ಯುವ ಮುಖಂಡ ಜಿ. ಕೇಶವಮೂರ್ತಿ ಉಪಸ್ಥಿತರಿದ್ದು, ನಂಜಪ್ಪ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.